ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ನಾಳೆ ನಡೆಯಬೇಕಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಳಂಬವಾಗುವ ಸಾಧ್ಯತೆಯಿದೆ.
ಹೊಸ ಬದಲಾವಣೆಯ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಭರದ ಸಿದ್ಧತೆ ನಡೆಸುತ್ತಿರುವ ನಟ ವಿಜಯ್ ಇಂದು ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದಾರೆ. ಆದರೆ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತದ ಕೊರತೆ ಇದ್ದು, ಹೀಗಾಗಿ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಅದರಂತೆ ಕಾಂಗ್ರೆಸ್ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರೂ, ಸ್ಪಷ್ಟ ಬಹುಮತಕ್ಕೆ ಬೇಕಿರುವ ಸೀಟುಗಳು ಇನ್ನೂ ಸಿಕ್ಕಿಲ್ಲ. ಹೀಗಾಗಿ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ಅಸಮಾಧಾನಗೊಂಡಿದ್ದಾರೆ. ಈ ಕಾರಣದಿಂದ ವಿಜಯ್ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ 118 ಸ್ಥಾನಗಳ ಬಹುಮತ ಬೇಕಾಗಿದೆ. ಆದರೆ, ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಉಳಿದ 10 ಸ್ಥಾನಕ್ಕೆ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಅದರಂತೆ ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡಲು ಒಪ್ಪಿಗೆ ನೀಡಿತ್ತು. ಇದರಿಂದ ಟಿವಿಕೆಯ ಸ್ಥಾನಗಳು 113ಕ್ಕೆ ಏರಿಕೆಯಾದರೂ ಇನ್ನೂ 5 ಸೀಟುಗಳ ಕೊರತೆ ಇದೆ.
ರಾಜ್ಯಪಾಲರಿಗೆ ವಿಜಯ್ ನೀಡಿದ ಹಕ್ಕು ಮಂಡನೆ ಪತ್ರದಲ್ಲಿ ಕೂಡ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಈ ಕಾರಣಕ್ಕೆ ವಿಜಯ್ ಗೆ ಸರ್ಕಾರ ರಚಿಸಲು ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ಬಹುಮತಕ್ಕೆ ಅಗತ್ಯವಿರುವ ಶಾಸಕರ ಬೆಂಬಲವನ್ನು ಸಾಬೀತುಪಡಿಸುವ ಪತ್ರವನ್ನು ಸ್ವೀಕರಿಸಿದ ನಂತರವೇ ಮುಂದಿನ ನಡೆ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಟಿವಿಕೆ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.



