ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಅಮೆರಿಕದ ಮಿಲಿಟರಿ ನೆಲೆಗಳನ್ನು ಲಕ್ಷ್ಯವಾಗಿಸಿಕೊಂಡು ಇರಾನ್ ಪಡೆಗಳು ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿವೆ. ಆದರೆ, ಅಮೆರಿಕದ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಯು ಇರಾನ್‌ನ ಈ ದಿಢೀರ್ ಯತ್ನವನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸ್ಪಷ್ಟಪಡಿಸಿದೆ.
ಟ್ರಂಪ್ ನಿರ್ಧಾರದ ಬೆನ್ನಲ್ಲೇ ಕ್ಷಿಪಣಿ ಪ್ರಹಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಸತತ 13 ದಿನಗಳ ವಾಯುದಾಳಿಯನ್ನು ತಾತ್ಕಾಲಿಕವಾಗಿ ಹಿಂಪಡೆದ ತಕ್ಷಣವೇ ಇರಾನ್ ಈ ನೇರ ಪ್ರತಿದಾಳಿಗೆ ಮುಂದಾಗಿದೆ. ಇತ್ತ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಮುಂದಿನ ರಾಜತಾಂತ್ರಿಕ ನಡೆಗಳ ಕುರಿತು ಮಹತ್ವದ ಮಾತುಕತೆ ಸಾಗುತ್ತಿರುವಾಗಲೇ ಈ ದಾಳಿ ಸಂಭವಿಸಿದೆ.
ದಾಳಿಯನ್ನು ಮೆಟ್ಟಿ ನಿಂತ ಅಮೆರಿಕ ಪಡೆಗಳು
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಂಜಾನೆ 3:15 ರ ಸುಮಾರಿಗೆ ಉಡಾಯಿಸಿದ ಪ್ರತಿಯೊಂದು ಕ್ಷಿಪಣಿಯನ್ನೂ ಗಾಳಿಯಲ್ಲೇ ಹೊಡೆದುರುಳಿಸಲಾಗಿದೆ. ಅಮೆರಿಕದ ವಾಯು ರಕ್ಷಣಾ ಪಡೆಗಳ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ‘ಸೆಂಟಕಾಮ್’ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಖಚಿತಪಡಿಸಿದೆ.



