ನಟಿ ಸಾನ್ಯ ಕಿರಿಕ್ ವಿಚಾರ: ದೇವರ ಮೊರೆ ಹೋದ ಪುತ್ತೂರಿನ ಕಂಬಳ ಸಮಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜ.೨೮ರ ಕಂಬಳದಲ್ಲಿ ನಡೆದಿದೆ ಎನ್ನಲಾದ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದ ಕಂಬಳ ಸಮಿತಿಯವರು ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದು, ದೇವರ ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಏಕಾದಶ ರುದ್ರ ಸೇವೆ ಸಂಕಲ್ಪ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ ಮಹಾಪೂಜೆಗೆ ಮುನ್ನ ಕಂಬಳ ಸಮಿತಿ ಗೌರವಾಧ್ಯಕ್ಷರಾದ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ನೇತೃತ್ವದ ತಂಡ ನಡೆಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿತು. ಕಂಬಳ ಗದ್ದೆಯಲ್ಲಿ ನಟಿಯೊಬ್ಬಳ ಜತೆ ಯಾರೋ ವ್ಯಕ್ತಿ ಅಸಭ್ಯ ವರ್ತನೆ ಮಾಡಿದ್ದಾನೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಫೋಟೋ, ವೀಡಿಯೋ ವೈರಲ್ ಮಾಡಲಾಗುತ್ತಿದೆ. ಕಂಬಳ ಸಮಿತಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಯತ್ನ ಮಾಡಲಾಗುತ್ತಿದೆ. ನಮಗೆ ಮಹಾಲಿಂಗೇಶ್ವರ ಸಾನಿಧ್ಯವೇ ನ್ಯಾಯಾಲಯ. ದೇವರು ನಮಗೆ ನ್ಯಾಯ ನೀಡಬೇಕು ಎಂದು ಪ್ರಾರ್ಥಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾರ್ಥನೆ ಮಾಡಿ, ಅಹಿತಕರ ಘಟನೆ ನಡೆದಿದೆ ಎನ್ನುತ್ತಾ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಯಾರ ಕುಮ್ಮಕ್ಕು ಇದೆ, ಯಾರು ಇದರ ಹಿಂದಿದ್ದಾರೆ ಎಂಬುದಕ್ಕೆ ದೇವರೇ ನಮಗೆ ನ್ಯಾಯ ಕೊಡಬೇಕು ಎಂದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಹಿಳೆಗೆ ಅನ್ಯಾಯವಾದರೂ ಶಕುಂತಳಾ ಶೆಟ್ಟಿ ಮೌನವಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅನ್ಯಾಯ ಆಗಿದೆ ಎಂದು ಮಹಿಳೆ ನನಗೆ ಹೇಳಬೇಕಲ್ಲವೇ? ಇಲ್ಲದಿದ್ದರೆ ನಾನೇನು ಮಾಡಲಿ? ನಾನು ರಾತ್ರಿ ೧೧ ಗಂಟೆಗೆ ಕಂಬಳ ಗದ್ದೆಯಿಂದ ನಿರ್ಗಮಿಸಿದ್ದೇನೆ. ನಸುಕಿನ ಜಾವ ನಟಿಯರು ಕಂಬಳ ಗದ್ದೆಗೆ ಮತ್ತೊಮ್ಮೆ ಬಂದಿದ್ದರಂತೆ, ಆಗ ಯಾರೋ ಅವರ ಜತೆ ಅಸಭ್ಯ ವರ್ತನೆ ತೋರಿದನಂತೆ ಎಂದೆಲ್ಲ ಹೇಳುತ್ತಿದ್ದಾರೆ. ಮರುದಿನ ಕುತ್ತಾರು ಕೊರಗಜ್ಜ ಸಾನಿಧ್ಯದಲ್ಲಿ ಅದೇ ನಟಿಯರೆಲ್ಲ ನನಗೆ ಸಿಕ್ಕಿದ್ದು, ಎಲ್ಲರೂ ಪುತ್ತೂರು ಕಂಬಳದ ವ್ಯವಸ್ಥೆ ಕುರಿತು ಪ್ರಸಂಶಿಸಿದ್ದಾರೆ. ಯಾರೂ ನನಗೆ ಹಿಂದಿನ ರಾತ್ರಿ ಅಹಿತಕರ ಘಟನೆ ನಡೆದಿದೆ ಎಂದು ಹೇಳಲೇ ಇಲ್ಲ ಎಂದರು.

ಅನ್ಯಧರ್ಮೀಯ ಅನ್ಯಾಯ ಮಾಡಿದ್ದಾನೆ ಎಂದೆಲ್ಲ ವೈರಲ್ ಮಾಡಲಾಗುತ್ತಿದೆ. ಮಹಿಳೆ ಮೇಲೆ ಯಾರೇ ದುಷ್ಕೃತ್ಯ ಎಸಗಿದ್ದರೂ ಅದು ತಪ್ಪೆ. ಆತ ಅನ್ಯಧರ್ಮೀಯನೇ ಆಗಿರಲಿ, ಸ್ವಧರ್ಮೀಯನೇ ಆಗಿರಲಿ. ತಪ್ಪು ಮಾಡಿದವ ಆಧರ್ಮೀಯನೇ ಹೊರತು ಧರ್ಮೀಯನಲ್ಲ. ಘಟನೆ ಬಗ್ಗೆ ಸಂತ್ರಸ್ತರೆನೆಸಿಕೊಂಡವರು ದೂರು ನೀಡಿದರೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಇದನ್ನೇ ನಾನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!