ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಸಂಸ್ಥೆ ಹಿಂಡನ್ಬರ್ಗ್ ಭಾರತದ ಅದಾನಿ ಉದ್ಯಮ ಸಮೂಹದ ಮೇಲೆ ಆರೋಪ ಮಾಡಿದ ಮಾತ್ರಕ್ಕೆ ಅದೇ ಆಧಾರದಲ್ಲಿ ವಿಶೇಷ ತನಿಖಾ ಸಂಸ್ಥೆ ಸ್ಥಾಪಿಸುವುದಕ್ಕೆ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರ ನೇತೃತ್ವದ ನ್ಯಾಯಪೀಠ ಬುಧವಾರ ತೀರ್ಪು ನೀಡಿದೆ.
ಇದೇ ವೇಳೆ, ಗೌತಮ್ ಅದಾನಿ ಉದ್ಯಮ ಸಮೂಹದ ವಿರುದ್ಧ ಕೇಳಿಬಂದಿರುವ ಎರಡು ಆರೋಪಗಳ ಕುರಿತಂತೆ ಸೆಬಿ (ಸೆಕ್ಯುರಿಟೀಸ್ ಆ್ಯಂಡ್ ಎಕ್ಸಚೇಂಜ್ ಬೋರ್ಡ್ ಆಫ್ ಇಂಡಿಯಾ) ಮೂರು ತಿಂಗಳ ಒಳಗಾಗಿ ತನಿಖೆ ಮುಗಿಸಬೇಕೆಂದು ಸಹ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ನ್ಯಾಯವಾದಿ ಪ್ರಶಾಂತ್ ಭೂಷಣ್ ನೋತೃತ್ವದ ಗುಂಪು ಸುಪ್ರೀಂಕೋರ್ಟಿನಲ್ಲಿ ದಾವೆ ಸಲ್ಲಿಸಿ, ಹಿಂಡನ್ಬರ್ಗ್ ಸಂಸ್ಥೆಯು ಅದಾನಿ ಉದ್ಯಮ ಸಾಮ್ರಾಜ್ಯದ ಮೇಲೆ ಮಾಡಿರುವ ಆರೋಪಗಳ ತನಿಖೆ ನಡೆಸುವುದಕ್ಕೆ ಸೆಬಿಗೆ ಹೊರತಾದ ವಿಶೇಷ ತನಿಖಾ ಸಂಸ್ಥೆ ನೇಮಿಸಬೇಕೆಂದು ಕೋರಿಕೊಂಡಿತ್ತು. ಒಂದೊಮ್ಮೆ ಇದಕ್ಕೆ ಸಮ್ಮತಿ ದೊರೆತಿದ್ದರೆ ಅದು ಸೆಬಿಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎಬ್ಬಿಸಿ, ಶೇರು ಮಾರುಕಟ್ಟೆಯ ನಿರ್ವಹಣೆಯಲ್ಲಿ ಭಾರತದ ಸಾಂಸ್ಥಿಕ ವ್ಯವಸ್ಥೆಯೇ ಕುಸಿದುಹೋಗಿದೆ ಎಂಬ ಸಂದೇಶ ಹೋಗುತ್ತಿತ್ತು. ಆದರೆ, ಇಂಥ ಯಾವುದೇ ನಿರ್ಧಾರಕ್ಕೆ ಹೋಗದಿರುವ ಸುಪ್ರೀಂಕೋರ್ಟ್, “ಸೆಬಿಯ ನಿಯಂತ್ರಣಾಧಿಕಾರದಲ್ಲಿ ಮಧ್ಯಪ್ರವೇಶಿಸುವ ವ್ಯಾಪ್ತಿ ಸುಪ್ರೀಂಕೋರ್ಟಿನದ್ದಲ್ಲ. ಅಲ್ಲದೇ, ಹಿಂಡನ್ಬರ್ಗ್ ಆರೋಪಿಸಿದ್ದ 24 ವಿಷಯಗಳ ಪೈಕಿ 22ರಲ್ಲಿ ಸೆಬಿ ತನ್ನ ತನಿಖೆ ಮುಗಿಸಿದೆ. ಉಳಿದ ಇನ್ನೆರಡು ಪ್ರಕರಣಗಳಲ್ಲಿ ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳ್ಳಲಿ” ಎಂದು ಹೇಳಿದೆ.
ಹಿಂಡನ್ಬರ್ಗ್ ಪ್ರಕರಣದ ಹಿನ್ನೆಲೆ
ಮಾರುಕಟ್ಟೆಯನ್ನು ಅಕ್ರಮವಾಗಿ ಪ್ರಭಾವಿಸುವ ಮೂಲಕ ಅದಾನಿ ಸಾಮ್ರಾಜ್ಯವು ತನ್ನ ಮೌಲ್ಯವನ್ನು ಹೆಚ್ಚಾಗಿಸಿಕೊಂಡು ತೋರಿಸಿಕೊಳ್ಳುತ್ತಿದೆ ಎಂದು ಕೆಲವು ತಿಂಗಳುಗಳ ಹಿಂದೆ ಹಿಂಡನ್ಬರ್ಗ್ ಎಂಬ ಸಂಸ್ಥೆ ವರದಿ ಮಾಡಿತ್ತು. ಈ ವರದಿಯಿಂದಾಗಿ ಅದಾನಿ ಸಮೂಹದ ಉದ್ಯಮಗಳ ಶೇರುಗಳು ಮಾರುಕಟ್ಟೆಯಲ್ಲಿ ಕೆಲವು ಅವಧಿಗೆ ಕುಸಿದಿದ್ದವು.
ಈ ಪ್ರಕರಣವನ್ನು ರಾಜಕಾಯವಾಗಿ ಬಳಸಿಕೊಳ್ಳುವುದಕ್ಕೆ ಯತ್ನಿಸಿದ ಗುಂಪುಗಳು, “ಮೋದಿ ಸರ್ಕಾರದ ಅಭಯ ಇರುವುದರಿಂದಲೇ ಅದಾನಿ ಸಾಮ್ರಾಜ್ಯ ಬೆಳೆಯುತ್ತಿದೆ” ಎಂಬ ವ್ಯಾಖ್ಯಾನವೊಂದನ್ನು ಎದ್ದುನಿಲ್ಲಿಸುವುದಕ್ಕೆ ಪ್ರಯತ್ನಿಸಿದವು.
ವಾಸ್ತವ ಏನೆಂದರೆ, ಹಿಂಡನ್ಬರ್ಗ್ ಎನ್ನುವುದು ಸತ್ಯಶೋಧನೆಗೆ ಇರುವ ಸಂಸ್ಥೆ ಅಲ್ಲ. ಶೇರುಮಾರುಕಟ್ಟೆಯ ಏರಿಳಿತಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಶಾರ್ಟ್ ಸೆಲ್ಲರ್ ಕಂಪನಿ ಅದು. ಅದಾನಿ ಉದ್ಯಮ ಸಮೂಹ ಮಾತ್ರವಲ್ಲದೇ ಜಾಗತಿಕವಾಗಿ ಇನ್ನೂ ಹಲವು ಕಂಪನಿಗಳನ್ನು ಅದು ಕಾಲಕಾಲಕ್ಕೆ ಗುರಿಯಾಗಿಸಿಕೊಂಡಿದೆ. ತಾನು ನೀಡುವ ವರದಿಯು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದಾಗ ಅದರಲ್ಲಿ ಲಾಭ ಮಾಡಿಕೊಳ್ಳುವುದು ಅದರ ಘೋಷಿತ ಉದ್ದೇಶವೇ ಆಗಿದೆ. ಅಲ್ಲದೇ, ಬೇರೆ ಬೇರೆ ದೇಶಗಳಲ್ಲಿ ತನ್ನ ಪ್ರಭಾವ ಬಳಸಿ ಸರ್ಕಾರಗಳನ್ನು ಬದಲಿಸುವ ಯತ್ನದಲ್ಲಿ ತೊಡಗಿಸಿಕೊಂಡಿರುವ ಜಾರ್ಜ್ ಸೊರೊಸ್ ಎಂಬ ಜಾಗತಿಕ ಉದ್ಯಮಿಯಿಂದ ಧನಸಹಾಯ ಪಡೆದಿರುವ ಸಂಸ್ಥೆಯೂ ಹೌದು.
ಈ ಎಲ್ಲ ಹಿನ್ನಲೆಗಳನ್ನಿಟ್ಟುಕೊಂಡು ನೋಡಿದಾಗ, “ಹಿಂಡನ್ಬರ್ಗ್ ಆಗಲಿ, ಇನ್ಯಾವುದೋ ಮೂರನೇ ಸಂಸ್ಥೆ ಏನೋ ವರದಿ ಪ್ರಕಟಿಸಿದೆ ಎಂಬ ಆಧಾರದಲ್ಲಿ ವಿಶೇಷ ತನಿಖಾ ತಂಡ ಸ್ಥಾಪಿಸುವುದು ಸಾಧುವಲ್ಲ” ಎಂದಿರುವ ಸುಪ್ರೀಂಕೋರ್ಟ್ ಆದೇಶದ ಮಹತ್ತ್ವ ಅರ್ಥವಾಗುತ್ತದೆ.
“ಸೆಬಿ ತಪ್ಪು ಮಾಡಿದೆ ಎನ್ನುವುದಕ್ಕೆ ಪೂರಕ ದಾಖಲೆಗಳು ಯಾವುದೂ ಇಲ್ಲ. ಯಾವುದೋ ವರದಿಯನ್ನಿಟ್ಟುಕೊಂಡು, ದೃಢೀಕೃತವಲ್ಲದ ದಾಖಲೆಗಳನ್ನಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದು ಅದರ ಉದ್ದೇಶವನ್ನೇ ಕದಡಿದಂತಾಗುತ್ತದೆ ” ಎನ್ನುವ ಮೂಲಕ ದಾವೆದಾರರಿಗೆ ಸಹ ಸುಪ್ರೀಂಕೋರ್ಟ್ ಬುದ್ಧಿಮಾತು ಹೇಳಿದೆ.
ಗೌತಮ್ ಅದಾನಿ ಪ್ರತಿಕ್ರಿಯೆ
“ಸತ್ಯಮೇವ ಜಯತೆ ಎಂಬುದನ್ನು ಸುಪ್ರೀಂ ತೀರ್ಪು ಸಾಬೀತು ಮಾಡಿದೆ. ನಮ್ಮ ಜತೆ ನಿಂತ ಎಲ್ಲರಿಗೂ ಕೃತಜ್ಞ. ಭಾರತದ ಅಭಿವೃದ್ಧಿ ಕಥಾನಕಕ್ಕೆ ನಮ್ಮ ಕೊಡುಗೆ ಮುಂದುವರಿಯಲಿದೆ” ಎಂದು ಗೌತಮ ಅದಾನಿ ಟ್ವೀಟ್ ಮಾಡಿದ್ದಾರೆ.