ಹೊಸದಿಗಂತ ವರದಿ, ಹುಬ್ಬಳ್ಳಿ:
ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ೧೫೦ ಕ್ಕೂ ಹೆಚ್ಚು ವಿರಕ್ತ ಮಠದ ಮಠಾಧಿಶರು ಒಕ್ಕರೊಲಿನಿಂದ ಆಗ್ರಹಿಸಿದರು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದರಿಸಲಿದೆ ಎಂದು ಎಚ್ಚರಿಸಿದರು.
ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಮಠಾಧಿಶರ ವೇದಿಕೆ ವತಿಯಿಂದ ಕೇಂದ್ರ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಉಪಪಂಗಡಗಳ ಸೇರಿಸುವ ಹಕ್ಕೊತ್ತಾಯ ಸಭೆ ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಜಪಿಸಿದರು.
ಸಮಾಜದ ಋಣ ತಿರಿಸಲು ನಾವು ಬೀದಿಗಿಳಿದು ಹೋರಾಟ ಮಾಡಲು ಬದ್ಧರಾಗಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಉಪಪಂಗಡಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಜಾಪ್ರಭುತ್ವ ಹೊಂದಿದೆ ದೇಶ ನಮ್ಮದಾಗಿದ್ದು, ಎಲ್ಲರೂ ಸೇರಿ ಒಗ್ಗಟಿನಿಂದ ನಮ್ಮ ಹಕ್ಕು ಪಡೆಯಬೇಕಿದೆ ಎಂದು ಸ್ವಾಮೀಜಿಗಳು ತಿಳಿಸಿದರು.
ಶ್ರೀಶೈಲದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಮಿಸಲಾತಿ ಪಟ್ಟಿಯಲ್ಲಿ ಸೇರಿಸಲು ಇಷ್ಟು ದಿನ ಬಿಡಿ ಬಿಡಿಯಾಗಿ ಮನವಿ ಮಾಡಲಾಗುತ್ತಿತ್ತು. ಮುಂದೆ ಒಗಟ್ಟಿನಿಂದ ಹೋರಾಟ ಮಾಡಿದರೆ ಕೇಂದ್ರ ಸರ್ಕಾರ ತೀರಸ್ಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಕಡೆಗಣಿಸಿದಾದ್ದಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಕ್ತರು ರೊಟ್ಟಿ ನೀಡುವ ಮೂಲಕ ಸ್ವಾಮೀಜಿಗಳ ಜೋಳಿಗೆ ತುಂಬಿಸಿದ್ದಾರೆ. ಈಗ ಅವರು ಹಸಿದಾಗ ರೊಟ್ಟಿ ನೀಡಿ ಹಸಿವು ನಿಗಿಸುವ ಕೆಲಸ ಸ್ವಾಮೀಜಿಗಳ ಮೇಲಿದೆ. ಆದರಿಂದ ಸಮಾಜದ ಎಲ್ಲ ಸ್ವಾಮೀಜಿಗಳು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಸಮಾಜದ ಮಕ್ಕಳಿಗೆ ಸೌಲಭ್ಯ ಸಿಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ ಎಂದು ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಕಾಶಿ ಚಂದ್ರಶೇಖರ ಸ್ವಾಮೀಜಿ, ಉಜ್ಜನಿಯ ಸಿದ್ಧಲಿಂಗ ಸ್ವಾಮೀಜಿ, ಮುಂಡರಗಿ ಅನ್ನದಾನ ಸ್ವಾಮೀಜಿ, ಶಿರಹಟ್ಟಿ ಫಕ್ಕೀರೇಶ್ವರಮಠ ಫಕ್ಕೀರ ಸಿದ್ಧರಾಮ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದ್ದರು.