Sunday, December 3, 2023

Latest Posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಆದಿಕವಿ ಪುರಸ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022-2023ನೇ ಸಾಲಿನ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಾಲ್ಮೀಕಿ ಮಹರ್ಷಿ ಜಯಂತಿಯಂದು ಅಂದರೆ ಇದೇ 28ನೇ ಅಕ್ಟೋಬರ್‌ 2023ನೇ ಶನಿವಾರ ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಂ ಸಭಾಂಗಣದಲ್ಲಿ ಬೆಳ್ಳಿಗ್ಗೆ 10:30ಕ್ಕೆ ಆಯೋಜಿಸಲಾಗಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌(ನೋಂ) ಕರ್ನಾಟಕದ ಗೌರವಾಧ್ಯಕ್ಷರು ಹಾಗೂ ಖ್ಯಾತ ಲೇಖಕರಾದ ಪ್ರೊ. ಪ್ರೇಮಶೇಖರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್‌ ಎನ್‌. ಕುಮಾರ್‌ ಉಪಸ್ಥಿತರಿರುತ್ತಾರೆ. ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರಿಪ್ರಕಾಶ ಕೋಣೆಮನೆ, ಜಿಕೆ ಗ್ರೂಪ್ಸ್‌ ಮಾಲೀಕರಾದ ಶ್ರೀ ಜಯರಾಮ್‌ ಹಾಗೂ ವಾಗ್ದೇವಿ ಶಿಕ್ಷಣಸಂಸ್ಥೆಗಳ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀ ಕೆ ಹರೀಶ್‌ ಕಾರ್ಯಕ್ರಮದ ಭಾಗವಾಗಿರುತ್ತಾರೆ.

1966 ರಲ್ಲಿ ಹುಟ್ಟಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ), ಕರ್ನಾಟಕದಲ್ಲಿ 2015ರಿಂದ ತನ್ನ ಕಾರ್ಯವಿಸ್ತರಣೆಯನ್ನು ಮಾಡುತ್ತ ಬಹುಮುಖೀ ಚಟುವಟಿಕೆಗಳಲ್ಲಿ ತೊಡಗಿದೆ. ರಾಜ್ಯ ಅಧಿವೇಶನ, ದಕ್ಷಿಣ ಭಾರತ ಮಟ್ಟದ ಬಹುಭಾಷಾ ಕವಿಗೋಷ್ಠಿ, ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮರ ಜನ್ಮಶತಮಾನೋತ್ಸವ ಮುಂತಾದವು ಇವುಗಳಲ್ಲಿ ಸೇರಿವೆ. ಸಾಹಿತ್ಯ ಸಾಧಕರನ್ನು ಗುರುತಿಸಿ, ಪುರಸ್ಕರಿಸುವ ಸಾರ್ಥಕ ಕಾರ್ಯಕ್ಕೂ ಪರಿಷದ್ ಮುಂದಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ), ಪ್ರತೀ ವರ್ಷವು ಎರಡು ಪ್ರಶಸ್ತಿ – ಪುರಸ್ಕಾರಗಳನ್ನು ನೀಡುತ್ತದೆ. ಅವುಗಳಲ್ಲಿ ಮೊದಲನೆಯದು..

1. ಆದಿಕವಿ ಪುರಸ್ಕಾರ:

ವಾಲ್ಮೀಕಿ ಮಹರ್ಷಿಗಳು ಭಾರತಕ್ಕಷ್ಟೇ ಅಲ್ಲ, ಜಗತ್ತಿಗೇ ಆದಿಕವಿ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಅವರ ನೆನಪಿನಲ್ಲಿ ಪ್ರತಿವರ್ಷ ಆದಿಕವಿ ಪುರಸ್ಕಾರವನ್ನು ನೀಡುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿರಿಯ ಸಾಹಿತಿಗಳು / ಸಾಹಿತ್ಯ ಸಂಶೋಧಕರಿಗೆ ಆದಿಕವಿ ಪುರಸ್ಕಾರವನ್ನು ನೀಡಲಾಗುತ್ತದೆ. ಆದಿಕವಿ ಪ್ರಶಸ್ತಿಯು ಒಂದು ಫಲಕ, ನೆನಪಿನ ಕಾಣಿಕೆ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣವನ್ನು ಹೊಂದಿದೆ.

ಈ ಸಾಲಿನ ಆದಿಕವಿ ಪುರಸ್ಕಾರವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ|| ಸಂಗಮೇಶ ಸವದತ್ತಿಮಠ ಇವರಿಗೆ ಒಲಿದು ಬಂದಿದೆ. ಶ್ರೀಯುತರು ಕನ್ನಡ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದ ಸಮಾಜ ಭಾಷಾ ವಿಜ್ಞಾನದ ಸರ್ಟಿಫಿಕೇಟ್‌, ಸಿಐಐಎಲ್‌ಎಲ್ ಮೈಸೂರು, ಐಐಟಿ ಕಾನ್ಪುರ್‌ನಿಂದ ಇಂಟೆನ್ಸಿವ್‌ ಕೋರ್ಸ್‌ ಇನ್‌ ನ್ಯಾಚುರಲ್‌ ಲ್ಯಾಂಗ್ವೇಜ್ ಪ್ರೊಸೆಸಿಂಗ್‌ ಮಾಡಿದ ನಂತರ ವಿಶ್ವ ವಿದ್ಯಾಲಯದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಡೀನ್ ಆಗಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿ, ಕಾರ್ಯದರ್ಶಿ, ಅಧ್ಯಕ್ಷ, ಕಾರ್ಯನಿರ್ವಾಹಕರಾಗಿ ವಿಶ್ವವಿದ್ಯಾಲಯದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅನೇಕ ವಿಶೇಷ ಜವಾಬ್ದಾರಿಗಳ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹಲವು ವಿಶೇಷ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದು ಸಾಂಸ್ಕೃತಿಕ ಸಂಘಟನೆಗಳನ್ನು ಸಂಸ್ಥಾಪಿಸಿ ಅನೇಕ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇಲ್ಲಿಯವರೆಗೆ ಇವರ ಸರಿಸುಮಾರು 136 ಗ್ರಂಥಗಳು ಪ್ರಕಟವಾಗಿವೆ. 500 ಉಪನ್ಯಾಸಗಳನ್ನು ನೀಡಿದ್ದಾರೆ. ರೂಪರಶ್ಮಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಅನೇಕ ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಅನೇಕ ಸಾಹಿತ್ಯಕ ಸಮಾರಂಭಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ. ದೇಶವಿದೇಶಗಳಲ್ಲಿ ರಾಮಾಯಣ ಮಹಾಭಾರತ ವಿಷಯಗಳ ಬಗೆಗೆ ಪ್ರಬಂಧ ಮಂಡಿಸಿದ್ದಾರೆ. ವಚನ ಸಾಹಿತ್ಯ, ಯಕ್ಷಗಾನ ಭಾಷಾ ವಿಜ್ಞಾನದ ಕುರಿತು ಅನೇಕ ವಿವಿಧ ವಿಷಯಗಳನ್ನೊಳಗೊಂಡ ಪ್ರಬಂಧಗಳನ್ನು, ಉಪನ್ಯಾಸಗಳನ್ನು ಮಂಡಿಸಿದ್ದಾರೆ. 13 ಪಿಎಚ್‌ಡಿ ಮತ್ತು 15 ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸರಿ ಸುಮಾರು 37-38 ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

2. ವಾಗ್ದೇವಿ ಪ್ರಶಸ್ತಿ:

ತಮ್ಮ ಬರವಣಿಗೆಯಿಂದ ಭರವಸೆ ಮೂಡಿಸುತ್ತ ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಕಿರಿಯ ಸಾಹಿತ್ಯ ಸಾಧಕರಿಗೆ ವಾಗ್ದೇವಿ ಪ್ರಶಸ್ತಿಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೀಡುತ್ತಾ ಬಂದಿದೆ.

ಈ ಸಾಲಿನ ವಾಗ್ದೇವಿ ಪ್ರಶಸ್ತಿಯನ್ನು ಶ್ರೀ ಸತ್ಯನಾರಾಯಣ ಕಾರ್ತಿಕ್ ಅವರಿಗೆ ನೀಡಲು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ನಿರ್ಧರಿಸಿದೆ. ಶ್ರೀಯುತರು ಕಿರಿಯ ವಯಸ್ಸಿನಲ್ಲಿಯೇ ಬಹು ದೊಡ್ಡ ಸಾಧನೆ ಮಾಡುತ್ತಿರುವ ಶೋಧಸಾಧಕರಾಗಿದ್ದಾರೆ. ಎಂ.ಎ ಪದವೀಧರರಾದ ಇವರು ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ವತಂತ್ರವಾಗಿ ಸಂಶೋಧನೆ ಮಾಡುತ್ತಿರುವ ಶ್ರೀಯುತರು 4 ಸ್ವತಂತ್ರ ಪುಸ್ತಕಗಳನ್ನು ಹಾಗೂ 3 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳನ್ನು ಅನೇಕ ನಿಯತಕಾಲಿಕಗಳು ಮತ್ತು ಅಭಿನಂದನಾ ಗ್ರಂಥಗಳಿಗೆ ಬರೆದಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2016ನೇ ಸಾಲಿನ ಅರಳು ಪ್ರಶಸ್ತಿ ಹಾಗೂ ಭಾರತ ಸರ್ಕಾರದ ರಾಷ್ಟ್ರಪತಿ ಪ್ರಶಸ್ತಿ, “ಮಹರ್ಷಿ ಬಾದಾರಾಯಣ ವ್ಯಾಸ ಸಮ್ಮಾನ್ ” ಪ್ರಶಸ್ತಿಗಳು ದೊರೆತಿವೆ.

ಕರ್ನಾಟಕ ಮತ್ತು ಭಾರತದ ಪುರಾತತ್ವ ಇಲಾಖೆ, ಶಾಸನ ಇಲಾಖೆ, ಇತಿಹಾಸ ಇಲಾಖೆ, ಗುಲಬರ್ಗಾ ವಿಶ್ವ ವಿದ್ಯಾಲಯ, ಮಿಥಿಕ್ ಸೊಸೈಟಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಗೋಖಲೆ ಇನ್ಸ್ಟಿಟ್ಯೂಟ್, ಮುಂಬೈ ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನು ಪ್ರಬಂಧ ಮಂಡನೆಯನ್ನು ಮಾಡಿದ್ದಾರೆ. ಪುರಾತತ್ವ ಇಲಾಖೆಯ ಉತ್ಖನನಗಳಲ್ಲಿ ಕೂಡ ಭಾಗವಹಿಸಿದವರಗಿದ್ದಾರೆ.

ಈ ಪ್ರಶಸ್ತಿಯು ಒಂದು ಫಲಕ, ನೆನಪಿನ ಕಾಣಿಕೆ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣವನ್ನು ಹೊಂದಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!