ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಎತ್ತರದ ಕಕ್ಷೆಗೆ ಏರಿಸುವ ನಾಲ್ಕನೇ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೋ ತಿಳಿಸಿದೆ.
ಸೂರ್ಯನ ಸಮಗ್ರ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಉಡ್ಡಯನಗೊಂಡಿದ್ದು, ನಾಲ್ಕನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಗುರುವಾರ ರಾತ್ರಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೊ, ʼಆದಿತ್ಯ ಈಗ ಭೂಮಿಯಿಂದ 256 ಕಿ.ಮೀ x 121973 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್‌ಡಿಎಸ್‌ಸಿ-ಎಸ್ಹೆಚ್ಎಆರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೊ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗಿದೆʼ.
ʼಮುಂದಿನ (5ನೇ) ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಸೆಪ್ಟೆಂಬರ್ 19ರಂದು ನಡೆಯಲಿದೆ. ಇದಕ್ಕೂ ಮುನ್ನ ಸೆ.5ರಂದು ಆದಿತ್ಯ-ಎಲ್ 1, ಎರಡನೇ ಹಂತದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಅದು ಭೂಮಿಯಿಂದ 282 ಕಿ.ಮೀ x 40225 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತ್ತುʼ ಎಂದು ಹೇಳಿದೆ.