ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನವು ಪ್ರಾರಂಭವಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಮತ್ತೆ ಗದ್ದಲ ಶುರುವಾಗಿದ್ದು,ಶಿವಸೇನೆಯ ಉದ್ದವ್ ಠಾಕ್ರೆ ಬಣದ ನಾಯಕ ಹಾಗೂ ವರ್ಲಿ ಶಾಸಕ ಆದಿತ್ಯ ಠಾಕ್ರೆ ಅವರು ಬೆಳಗಾವಿ ನಗರದಲ್ಲಿ ಮರಾಠಿ ಭಾಷಿಗರು ಎದುರಿಸುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಟೀಕಿಸಿ ಇನ್ನು ನ್ಯಾಯಾಲಯದಲ್ಲಿ ಬೆಳಗಾವಿ ಪ್ರಕರಣ ಇತ್ಯರ್ಥವಾಗುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ವಿಷಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗೆಹರಿಸದಿರುವುದನ್ನು ಆದಿತ್ಯ ಠಾಕ್ರೆ ಖಂಡಿಸಿದ್ದು, ಈ ಭಾಗದ ಮರಾಠಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಕೊಡಲು ಮಧ್ಯಸ್ಥಿಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿ, ಇಂದಿನ ಮಹಾರಾಷ್ಟ್ರ ವಿಧಾನಸಭೆ ಕಲಾಪ ಬಹಿಷ್ಕರಿಸಿದ್ದಾರೆ.
ಪುಣೆಯಲ್ಲಿ ಮಾತನಾಡಿರುವ ಅವರು, ಬೆಳಗಾವಿಯಲ್ಲಿ ಮರಾಠಿ ಭಾಷೆಯವರನ್ನು ತುಳಿಯಲಾಗುತ್ತಿದೆ. ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ನಾಯಕರನ್ನು ಕರ್ನಾಟಕ ಪ್ರವೇಶಕ್ಕೆ ಸರ್ಕಾರದಿಂದ ನಿರ್ಬಂಧಿಸಲಾಗಿದೆ ಎಂದಿದ್ದಾರೆ. ಮರಾಠಿ ಭಾಷಿಕರ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಹಿಂದಿನ ‘ಅಸಾಂವಿಧಾನಿಕ’ ಸಿಎಂ ಭರವಸೆ ಕೊಟ್ಟಿದ್ದರು. ಅಂದಿನ ಸಿಎಂ ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಭಾನುವಾರ ಕೊಲ್ಲಾಪುರದಲ್ಲಿ ಎನ್ಸಿಪಿ (ಎಸ್ಪಿ) ಮುಖ್ಯಸ್ಥರಾದ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಪ್ರಕರಣದ ಸುಪ್ರೀಂನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸಲು ಮಹಾರಾಷ್ಟ್ರ, ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.