ಹೊಸದಿಗಂತ ವರದಿ,ಶಿವಮೊಗ್ಗ:
ತೂಗುಸೇತುವೆ ನಿರ್ಮಾಣದಿಂದ ಸಂಚಾರಕ್ಕೆ ಅನುಕೂಲವಾಯಿತು ಎಂದು ಭಾವಿಸಿದ್ದ ತೀರ್ಥಹಳ್ಳಿ ತಾಲೂಕಿನ ಜನರಿಗೆ ಇದೀಗ ಜೀವಭಯ ಉಂಟಾಗಿದೆ. ಪ್ರತಿದಿನ ಈ ತೂಗು ಸೇತುವೆಯಲ್ಲಿ ಜನರು ಸಂಚರಿಸುತ್ತಾರೆ. ನಿರ್ವಹಣೆ ಇಲ್ಲದ ತೂಗು ಸೇತುವೆ ಯಾವ ಘಳಿಗೆಯಲ್ಲೂ ನದಿಗೆ ಉರುಳುವ ದುಸ್ಥಿತಿಯಲ್ಲಿದೆ. ತಾಲೂಕಿನ ಭೀಮನಕಟ್ಟೆ ಸಮೀಪ ತುಂಗಾನದಿಗೆ ಅಡ್ಡಲಾಗಿ ಒಂದೂವರೆ ದಶಕದ ಹಿಂದೆ ನಿರ್ಮಾಣಗೊಂಡ ತೂಗು ಸೇತುವೆ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ನಿರ್ವಹಣೆ ಇಲ್ಲದ ಪರಿಣಾಮ ತೂಗು ಸೇತುವೆ ಅಳಿವಿನ ಅಂಚಿಗೆ ತಲುಪಿದೆ. ಸೇತುವೆ ನಿರ್ವಹಣೆಗೆ ಸಂಬಂಧಿಸಿದ ಇಲಾಖೆ ಯಾವುದೆಂಬ ಸ್ಪಷ್ಟತೆ ಇಲ್ಲವಾಗಿದೆ.
ತೂಗುಸೇತುವೆ ಸ್ಥಾಪನೆಗೊಂಡ 15 ವರ್ಷದಲ್ಲಿ 1 ಬಾರಿ ಮಾತ್ರ ನಿರ್ವಹಣೆ ನಡೆದಿದೆ. ಸೇತುವೆಗೆ ತುಕ್ಕು ಹಿಡಿದಿದ್ದು ಸಂಪೂರ್ಣ ಕುಸಿಯುವ ಹಂತ ತಲುಪಿದರೂ ಆಡಳಿತ ಮಾತ್ರ ನಿಗಾ ವಹಿಸಿಲ್ಲ.
ಸಾರ್ವಜನಿಕರ ಒತ್ತಾಸೆ ಮೇರೆಗೆ ಎಂಎಡಿಬಿ 25 ಲಕ್ಷ ರೂ. ವೆಚ್ಚದಲ್ಲಿ 2007ರಲ್ಲಿ ತೂಗು ಸೇತುವೆ ನಿರ್ಮಿಸಿದೆ. ಸೇತುವೆಗೆ 25 ವರ್ಷ ಎಂದು ಗ್ಯಾರಂಟಿ ಸರ್ಕಾರಕ್ಕೆ ಸಲ್ಲಿಕೆಗೊಂಡ ತಾಂತ್ರಿಕ ದಾಖಲೆಯಲ್ಲಿ ಉಲ್ಲೇಖವಾಗಿದೆ.
ಇದೀಗ ತೂಗು ಸೇತುವೆಯನ್ನು ನಿರ್ವಹಣೆ ಮಾಡುವ ಅಗತ್ಯವಿದ್ದರೂ ಅನುದಾನ ನೀಡುವ ಇಲಾಖೆ ಯಾವುದು ಎಂಬ ಕುರಿತು ಸರಕಾರದ ಸ್ಪಷ್ಟ ಆದೇಶ ಇಲ್ಲವಾಗಿದೆ. ಹೆಗ್ಗೋಡು ಗ್ರಾ.ಪಂ.ವ್ಯಾಪ್ತಿ ಪ್ರದೇಶ ಹೆಚ್ಚಿದೆ. ಸೇತುವೆ ಪ್ರಯೋಜನ ಮುಳುಬಾಗಿಲು ಗ್ರಾ.ಪಂ. ವ್ಯಾಪ್ತಿಗೂ ಸೇರಿದೆ. ತೂಗು ಸೇತುವೆ ನಿರ್ವಹಣೆಗೆ ಗ್ರಾ.ಪಂ.. ತಾ.ಪಂ.,ಜಿ.ಪಂ. ಆಡಳಿತ ವಿಶೇಷ ಆಸಕ್ತಿ ತೋರಿಲ್ಲ.