ಚಿತ್ರದುರ್ಗದಲ್ಲಿ ಮುಂದುವರಿದ ಹಿಜಾಬ್ – ಕೇಸರಿ ಶಾಲು ವಿವಾದ : ಎಸ್.ಆರ್.ಎಸ್. ಕಾಲೇಜಿನ ಬಳಿ ಪ್ರತಿಭಟನೆ

ಹೊಸ ದಿಗಂತ ವರದಿ , ಚಿತ್ರದುರ್ಗ:

ಜಿಲ್ಲೆಯಲ್ಲಿ ಹಿಜಾಬ್ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಉಂಟಾಗಿದ್ದ ಹಿಜಾಬ್ ಗದ್ದಲ, ಶುಕ್ರವಾರ ಪಿಳ್ಳೆಕೆರೇನಹಳ್ಳಿಯ ಎಸ್‌ಆರ್‌ಎಸ್ ಕಾಲೇಜು ಮುಂದುವರಿಯಿತು. ಹೈಕೋರ್ಟ್ ಮಧ್ಯಂತರ ಆದೇಶ ನೀಡಿರುವ ವಿಷಯ ತಿಳಿದಿದ್ದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇದರಿಂದ ಕಾಲೇಜಿನ ಬಳಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿನಿಯರಿಗೆ ಎಸ್‌ಆರ್‌ಎಸ್ ಕಾಲೇಜು ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತು. ವಿದ್ಯಾರ್ಥಿನಿಯರು ಕಾಲೇಜು ಆವರಣ ಪ್ರವೇಶಿಸದಂತೆ ಗೇಟ್ ಬಂದ್ ಮಾಡಲಾಯಿತು. ಇದರಿಂದಾಗಿ ಸುಮಾರು ೩೪ ವಿದ್ಯಾರ್ಥಿನಿಯರು ಗೇಟ್ ಬಳಿ ಜಮಾಯಿಸಿದರು. ಕಾಲೇಜು ಪ್ರವೇಶ ನೀಡುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಹೈಕೋರ್ಟ್ ಮಧ್ಯಂತರ ಆದೇಶದ ಕಾರಣ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಿಲ್ಲ.
ಹೈಕೋರ್ಟ್ ಆದೇಶವನ್ನು ಕಾಲೇಜಿನ ಆಡಳಿತ ಮಂಡಳಿ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಪದವಿ ಕಾಲೇಜುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಮಾತ್ರ ನಮಗೆ ಪ್ರವೇಶ ನೀಡುತ್ತಿಲ್ಲ. ಕಳೆದ ಮೂರು ದಿನಗಳಿಂದ ನಮಗೆ ಪ್ರವೇಶ ನೀಡಿಲ್ಲ. ನಮ್ಮ ಕಲಿಕೆಗೆ ತೊಂದರೆಯಾಗಿದೆ. ನಮಗೆ ತರಗತಿಗಳಿಗೆ ಪ್ರವೇಶ ನೀಡುವುದಿಲ್ಲ ಎನ್ನುವುದಾದರೆ, ಬೇರೆ ಯಾವ ವಿದ್ಯಾರ್ಥಿಗಳಿಗೂ ತರಗತಿಗಳನ್ನು ನಡೆಸಬಾರದು ಎಂದು ಹಠ ಹಿಡಿದರು.
ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ೨೦೦೭-೦೮ ರಿಂದ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ವಸ್ತ್ರಸಂಹಿತೆ ಜಾರಿಯಲ್ಲಿದೆ. ಈವರೆಗೆ ಸಮವಸ್ತ್ರ ನಿಯಮ ಪಾಲಿಸಿದ ವಿದ್ಯಾರ್ಥಿನಿಯರಲ್ಲಿ ಕೆಲವರು ಈಗ ಹಿಜಾಬ್ ಧರಿಸಿಕೊಂಡು ಬರುವುದಾಗಿ ಹಠ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲ. ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಒಂದೇ ಮನೋಭಾವದಿಂದ ನೋಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿಜಾಬ್ – ಕೇಸರಿ ಶಾಲಿನ ವಿವಾದ ಉಂಟಾಗಿದೆ. ಅಲ್ಲದೇ ಈ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ನಾವು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿದೆ. ಹಾಗಾಗಿ ಹಿಜಾಬ್ ಧರಸಿ ಬಂದಿರುವ ವಿದ್ಯಾರ್ಥಿನಿಯರಿಗೆ ಅನಿವಾರ್ಯವಾಗಿ ಪ್ರವೇಶ ನಿರಾಕರಿಸಲಾಗಿದೆ ಎಂದರು.
ನಮ್ಮ ಕಾಲೇಜಿನಲ್ಲಿ ಬಿಸಿಎ, ಬಿಕಾಂ, ಬಿಬಿಎಂ ಸೇರಿದಂತೆ ಒಟ್ಟು ೪೬೪ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ೪೫ ವಿದ್ಯಾರ್ಥಿಗಳು, ೨೯ ವಿದ್ಯಾರ್ಥಿನಿಯರು ಸೇರಿದಂತೆ ೭೪ ಜನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಇವರಲ್ಲಿ ೩೪ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗಿದ್ದಾರೆ. ಪ್ರತಿಭಟನಾನಿರತರನ್ನು ಹೊರತುಪಡಿಸಿ ಉಳಿದಂತೆ ಎಲ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಜಾಬ್ ಧರಿಸಿ ಬಂದಿದ್ದ ಕೆಲವು ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಕಾಲೇಜು ಗೇಟಿನ ಬಳಿ ಪ್ರತಿಭಟನೆ ನಡೆಸಿದರು. ಇದರಿಂದ ಕಾಲೇಜಿನ ಬಳಿ ಬಿಗುವಿನ ವಾತಾವರಣ ಉಂಟಾಗಿತ್ತು. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!