July 6, 2026
Monday, July 6, 2026
spot_img

ಹಿಮಾಚಲದ ಆಪಲ್‌ಗೆ ಹವಾಮಾನ ವೈಪರೀತ್ಯದ ಪೆಟ್ಟು: ಇನ್ನು ಸೇಬು ಹಣ್ಣು ಕೊಳ್ಳುವುದು ಕಷ್ಟ ಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಗ್ರಾಹಕರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯ ಹೊಡೆತಕ್ಕೆ ಸಿಲುಕಿ ಈ ಬಾರಿ ಸೇಬು ಹಣ್ಣಿನ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಆಪಲ್ ದರ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ.

ಹಿಮಾಚಲದಲ್ಲಿ ಅರ್ಧಕ್ಕರ್ಧ ಕುಸಿದ ಆಪಲ್ ಇಳುವರಿ

ದೇಶದ ಪ್ರಮುಖ ಸೇಬು ಉತ್ಪಾದನಾ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಕಳೆದ ವರ್ಷ 6.99 ಲಕ್ಷ ಮೆಟ್ರಿಕ್ ಟನ್ ಇಳುವರಿ ದಾಖಲಾಗಿತ್ತು. ಆದರೆ ಈ ವರ್ಷ ಅದು ಕೇವಲ 2.63 ಲಕ್ಷ ಮೆಟ್ರಿಕ್ ಟನ್‌ಗೆ ಕುಸಿದಿದೆ. ಅಂದರೆ ಮಾರುಕಟ್ಟೆಗೆ ಬರೋಬ್ಬರಿ 4.36 ಲಕ್ಷ ಮೆಟ್ರಿಕ್ ಟನ್ ಸೇಬಿನ ಕೊರತೆಯಾಗಲಿದೆ.

ಕೃಷಿ ಭೂಮಿ ಮತ್ತು ರೈತರ ಸಂಖ್ಯೆ ಇಳಿಕೆ

ಕಳೆದ ಬಾರಿ 2.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಆಪಲ್ ಕೃಷಿ, ಈ ಬಾರಿ ಕೇವಲ 1.16 ಲಕ್ಷ ಹೆಕ್ಟೇರ್‌ಗೆ ಸೀಮಿತವಾಗಿದೆ. ಹಿಮಾಚಲದ ಸುಮಾರು 2.5 ಲಕ್ಷ ಕುಟುಂಬಗಳು ಈ ಉದ್ಯಮವನ್ನು ನಂಬಿವೆ. ಆದರೆ ಔಷಧಿಗಳ ಬೆಲೆ ಏರಿಕೆ ಹಾಗೂ ಅಧಿಕ ನಿರ್ವಹಣಾ ವೆಚ್ಚದಿಂದಾಗಿ ಕಂಗೆಟ್ಟ ಹಲವು ರೈತ ಕುಟುಂಬಗಳು ಈ ಬಾರಿ ಸೇಬು ಬೆಳೆಯಿಂದಲೇ ದೂರ ಸರಿದಿವೆ.

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಇಳುವರಿ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಸೇಬು ಹಣ್ಣಿನ ಬೆಲೆ ಸಾರ್ವಜನಿಕರ ಕೈಗೆಟುಕದಷ್ಟು ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !