ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲು ಶಾಸಕ ಅಪ್ಪಚ್ಚುರಂಜನ್ ಸಲಹೆ

ದಿಗಂತ ವರದಿ ಸೋಮವಾರಪೇಟೆ:

ಪಟ್ಟಣದಲ್ಲಿ ಶುಚಿತ್ವ, ಕುಡಿಯುವ ನೀರು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸಲಹೆ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಒಂದು ತಿಂಗಳೊಳಗೆ ಬಗೆಹರಿಸುವಂತೆ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ನಿರ್ದೇಶನ ನೀಡಿದ ಶಾಸಕರು, ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವಾಗಿ ಕ್ರಿಯಾ ಯೋಜನೆ ತಯಾರಿಸಿ, ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ದಿನವಿಡೀ ನೀರು ಸರಬರಾಜು: ಪಟ್ಟಣದ ನೀರು ಸರಬರಾಜು ವ್ಯವಸ್ಥೆ ಹಳೆಯದಾಗಿದ್ದು, ದಿನದ 24 ಗಂಟೆಯೂ ನೀರು ಸರಬರಾಜು ಮಾಡಲು ವಿಸ್ತೃತ ಯೋಜನಾ ವರದಿ ತಯಾರಿಸಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ನಿರ್ಮಿಸಿ, ಬೇರೆಯವರಿಗೆ ಬಾಡಿಗೆ ನೀಡಲಾಗಿದೆ. ಇದರಿಂದ ಪ.ಪಂ.ಗೆ ಆದಾಯ ಬರುತ್ತಿಲ್ಲ. ಇದನ್ನು ಸರ್ವೆ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಅಧ್ಯಕ್ಷ ಪಿ.ಕೆ.ಚಂದ್ರ ಹಾಗೂ ಸದಸ್ಯ ಬಿ.ಆರ್.ಮಹೇಶ್ ಸಲಹೆ ಮಾಡಿದರು.
ಪಾರ್ಕಿಂಗ್ ಸಮಸ್ಯೆ: ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮಾರ್ಕೆಟ್ ಏರಿಯಾ ತೆರವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು. ಏಕಾಏಕಿ ಮಾರ್ಕೆಟ್ ಏರಿಯಾವನ್ನು ಸ್ಥಳಾಂತರಿಸಬಾರದು. ಕಾಲಾವಕಾಶ ನೀಡಬೇಕು ಎಂದು ವಿಪಕ್ಷ ಸದಸ್ಯರಾದ ಸಂಜೀವ, ಶೀಲಾ ಡಿಸೋಜ, ವೆಂಕಟೇಶ್ ಮತ್ತಿತರರು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ರಸ್ತೆ ಬದಿಯ ಚರಂಡಿ ನಿರ್ವಹಣೆ, ಮಣ್ಣುಗುಡ್ಡೆಗಳ ತೆರವಿಗೆ 2.60 ಲಕ್ಷ ಅನುದಾನ ನೀಡಿದ್ದು, ಗುತ್ತಿಗೆದಾರರು ಒಂದೆರಡು ವಾರ್ಡ್‍ಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ ಎಂದು ಉಪಾಧ್ಯಕ್ಷ ಸಂಜೀವ ಆರೋಪಿಸಿದರು. ಹೊಸ ಬಡಾವಣೆಯಲ್ಲಿ ನಿವೇಶನ ರಹಿತ ಬಡವರಿಗೆ ನಿವೇಶನ ಹಾಗೂ ಮನೆ ನೀಡಲಾಗಿದ್ದು, ಕೆಲವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶೀಲಾ ಡಿಸೋಜ ಒತ್ತಾಯಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಸಮಸ್ಯೆಯಿದೆ ಎಂದು ಜಯಂತಿ ಶಿವಕುಮಾರ್ ಹೇಳಿದರು.
ಸದಸ್ಯರ ನಡುವೆ ವಾಕ್ಸಮರ: ಕಕ್ಕೆಹೊಳೆ ಜಂಕ್ಷನ್‍ನಲ್ಲಿ ಇಂದಿರಾಗಾಂಧಿ ಅಭಿಮಾನಿಗಳ ಸಂಘದವರು ಈ ಹಿಂದೆ ನಿರ್ಮಿಸಿದ್ದ ಬಸ್‍ ತಂಗುದಾಣವನ್ನು ಕೆಲ ಬಿಜೆಪಿ ಕಾರ್ಯಕರ್ತರು ಒಡೆದು ಹೊಸ ತಂಗುದಾಣ ನಿರ್ಮಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಮೂಲ ನಿರ್ಮಾಣ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಎಂದು ಹೆಸರು ಹಾಕುವಂತೆ ಮನವಿ ಮಾಡಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಸದಸ್ಯರುಗಳ ಹೆಸರನ್ನೂ ಹಾಕಿಲ್ಲ. ಇದು ಪಂಚಾಯತಿ ಸದಸ್ಯರು ಹಾಗೂ ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಶೀಲಾ ಡಿಸೋಜ, ಬಿ.ಸಂಜೀವ, ಬಿ.ಸಿ.ವೆಂಕಟೇಶ್ ಆರೋಪಿಸಿದರು.
ಈ ವಿಚಾರದ ಬಗ್ಗೆ ಸಭೆಯಲ್ಲಿ ಸದಸ್ಯರುಗಳ ನಡುವೆ ವಾಕ್ಸಮರ ನಡೆಯಿತು. ಇಂದಿರಾಗಾಂಧಿ ಅವರ ಹೆಸರು ಹಾಕುತ್ತೇವೆ ಎಂದು ಕೊನೆ ಕ್ಷಣದವರೆಗೂ ಹೇಳಿಕೊಂಡು ಬಂದಿದ್ದ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ಬಿ.ಆರ್. ಸೋಮೇಶ್ ಅವರು ಅಧ್ಯಕ್ಷರೂ ಸೇರಿದಂತೆ ಸದಸ್ಯರ ದಿಕ್ಕು ತಪ್ಪಿಸಿದ್ದಾರೆ ಎಂದು ಸಂಜೀವ ದೂರಿದರು.
ಶಾಸಕರಿಂದ ಸಭಾತ್ಯಾಗ:ಬಸ್ ನಿಲ್ದಾಣದಲ್ಲಿ ಇಂದಿರಾಗಾಂಧಿ ಅವರ ಹೆಸರು ಹಾಕಲೇಬೇಕು. ತಪ್ಪಿದಲ್ಲಿ ನಾವುಗಳು ಮುಂದಿನ ಸಭೆಗಳಿಗೆ ಬರುವುದಿಲ್ಲ. ನಾಮನಿರ್ದೇಶನ ಸದಸ್ಯ ಸೋಮೇಶ್ ಅವರ ಹೆಸರನ್ನು ಪಂಚಾಯಿತಿ ಸದಸ್ಯ ಎಂದು ಫಲಕದಲ್ಲಿ ಹಾಕುವ ಮೂಲಕ ಇತರ ಸದಸ್ಯರಿಗೆ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಏರುದನಿಯಲ್ಲಿ ಚರ್ಚೆಗಳು ನಡೆಯುತ್ತಿದ್ದಂತೆ ಶಾಸಕರು ಸಭೆಯಿಂದ ನಿರ್ಗಮಿಸಿದರು.
ಸದಸ್ಯರಾದ ಮೃತ್ಯುಂಜಯ , ಎ.ಬಿ.ಶುಭಕರ್, ನಾಗರತ್ನ, ಮೋಹಿನಿ, ಜೀವನ್, ನಾಮ ನಿರ್ದೇಶನ ಸದಸ್ಯರಾದ ಸೋಮೇಶ್, ಶರತ್‍ಚಂದ್ರ ಅವರುಗಳು ಸಭೆಯಲ್ಲಿ ಇದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!