ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಗೆ ದಕ್ಷಿಣ ಆಫ್ರಿಕಾ ತಂಡ 209 ರನ್ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿದ್ದು, ಈ ಮೂಲಕ ಭಾರತ 14 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ನಿನ್ನೆ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 16ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 2ನೇ ದಿನವಾದ ಇಂದು ಕೀಗನ್ ಪೀಟರ್ಸನ್ ಅರ್ಧಶತಕದ ಹೊರತಾಗಿಯೂ 210 ರನ್ಗಳಿಸಲಷ್ಟೇ ಶಕ್ತವಾಯಿತು.
ನಿನ್ನೆ 8 ರನ್ಗಳಿಸಿ 2ನೇ ದಿನ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ಮಾರ್ಕ್ರಮ್ 2ನೇ ದಿನದ 2ನೇ ಎಸೆತದಲ್ಲೇ ಬುಮ್ರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಇನ್ನು ನೈಟ್ ವಾಚ್ಮನ್ ಆಗಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಕೇಶವ್ ಮಹಾರಾಜ್ 25 ರನ್ಗಳಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
4ನೇ ವಿಕೆಟ್ಗೆ ಜೊತೆಯಾದ ಕೀಗನ್ ಪೀಟರ್ಸನ್ ಮತ್ತು ವ್ಯಾನ್ ಡರ್ ಡಸೆನ್ 67 ರನ್ಗಳ ಜೊತೆಯಾಟ ನೀಡಿ ಕುಸಿಯುತ್ತಿದ್ದ ತಂಡಕ್ಕೆ ಚೇತರಿಕೆ ನೀಡಿದರು. ವ್ಯಾನ್ ಡರ್ ಡಸೆನ್ 24 ರನ್ಗಳಿಸಿ ಯಾದವ್ಗೆ 2ನೇ ಬಲಿಯಾದರು.
ಬವುಮಾ(28) ಶಮಿ ಬೌಲಿಂಗ್ನಲ್ಲಿ ಔಟಾಗುತ್ತಿದ್ದಂತೆ ಹರಿಣಗಳ ಪತನ ಶುರುವಾಯಿತು. ಅದೇ ಓವರ್ನಲ್ಲಿ ವಿಕೆಟ್ ಕೀಪರ್ ಕೈಲ್ ವೆರಿನ್ ಕೂಡ ಡಕ್ಔಟ್ ಆದರು. ಪೀಟರ್ಸನ್ 166 ಎಸೆತಗಳಲ್ಲಿ 72 ರನ್ ಸಿಡಿಸಿ ಬುಮ್ರಾ ಬೌಲಿಂಗ್ನಲ್ಲಿ ಪೂಜಾರಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ರಬಾಡ(15), ಒಲಿವಿಯರ್ ಅಜೇಯ 10 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.