ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಜೊತೆಗೆ ಕಳೆದ 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕ್, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ.
ಕೊನೆಯದ್ದಾಗಿ 2002ರಲ್ಲಿ ಪಾಕ್ ಆಸೀಸ್ ನೆಲದಲ್ಲಿ ಸರಣಿ ಗೆದ್ದಿತ್ತು.
141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ 84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಜೋಡಿ ವಿಕೆಟ್ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕ್ ಪರ ಸೈಮ್ ಅಯೂಬ್ 42 ರನ್, ಅಬ್ದುಲ್ಲಾ ಶಫಿಕ್ 37 ರನ್ ಗಳಿಸಿ ಔಟಾದರೆ, ಮೊಹಮ್ಮದ್ ರಿಜ್ವಾನ್ 30 ರನ್ ಹಾಗೂ ಬಾಬರ್ ಆಜಂ 28 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಆಸೀಸ್ ತಂಡವು 31.5 ಓವರ್‌ಗಳಲ್ಲಿ ಕೇವಲ 140 ರನ್ಗಳಿಗೆ ಆಲೌಟ್ ಆಯಿತು.