24 ಗಂಟೆಗಳ ಸತತ ಕಾರ್ಯಾಚರಣೆ, ಕೊನೆಗೂ ಬಲೆಗೆ ಬಿದ್ದೇ ಬಿಡ್ತು ಖತರ್ನಾಕ್ ಚಿರತೆ

ಹೊಸದಿಗಂತ ಕುಮಟಾ:

ತಾಲೂಕಿನ ಬಾಡ ಗ್ರಾ.ಪಂ ವ್ಯಾಪ್ತಿಯ ಮಾದರಿ ರಸ್ತೆಯಲ್ಲಿ ಚಿರತೆ ಮೂವರ ಮೇಲೆ ದಾಳಿ ನಡೆಸಿ ಮನೆಯೊಂದರಲ್ಲಿ ಅವಿತು ಕುಳಿತು ತನ್ನ ಆರ್ಭಟದಿಂದ ಜನರಲ್ಲಿ ನಡುಕ ಹುಟ್ಟಿಸಿದ್ದು, ಸತತ ಕಾರ್ಯಾಚರಣೆಯ 24 ಗಂಟೆಯ ನಂತರದಲ್ಲಿ, ತಜ್ಞ ವೈದ್ಯರು ಚಿರತೆಗೆ ಅರವಳಿಕೆಯ ಮದ್ದು ನೀಡಿ ಅದರ ಪ್ರಜ್ಞೆ ತಪ್ಪಿಸಿ, ಬೋನಿಗೆ ತುಂಬಿ ಸಾಗಿಸಿದ ಘಟನೆ ಶನಿವಾರ ನಡೆದಿದೆ.

ಬಾಡ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ಹಲವು ಜನವಸತಿ ಪ್ರದೇಶಗಳಿಗೆ ನುಗ್ಗಿ ಜನರನ್ನು ಆತಂಕಕ್ಕೀಡು ಮಾಡಿತ್ತು. ಹೊಸದಾಗಿ ನಿರ್ಮಾಣ ಹಂತದ ಮನೆಯೊಳಗೆ ಅಡಗಿದ್ದ ಚಿರತೆ, ಅಲ್ಲಿಗೆ ಬಂದ ಈಶ್ವರ ಹೊನ್ನಪ್ಪ ನಾಯ್ಕ ಎಂಬುವರ ಮೇಲೆ ದಾಳಿ ನಡೆಸಿ ಅವಾಂತರ ಸೃಷ್ಟಿಸಿತ್ತು.

ಇದಾದ ಬಳಿಕ ಸಂಜೆ ಸುಮಾರು 4 ಗಂಟೆಗೆ ಬಾಡದ ನಿವಾಸಿ ಮಾಬ್ಲೇಶ್ವರ ನಾಯ್ಕ ಎಂಬುವರು ಮನೆಯ ಟೆರೇಸ್ ಮೇಲೆ ಮೊಬೈಲ್ ಅಲ್ಲಿ ಮಾತನಾಡುವಾಗ ಚಿರತೆ ಟೆರೆಸ್ ಗೆ ಜಿಗಿದು, ಮಾಬ್ಲೇಶ್ವರ ಬೀರಪ್ಪ ನಾಯ್ಕ ಅವರ ಮೇಲೆರಗಿ ಅವರ ಎಡಗೈ ಸೀಳಿ ಗಂಭೀರ ಗಾಯಗೊಳಿಸಿತ್ತು. ಇದೇವೇಳೆ ಹರಿಶ್ಚಂದ್ರ ರಾಮ ನಾಯ್ಕ ಅವರ ಮೇಲೆಯೂ ದಾಳಿ ಮಾಡಿದೆ. ಅವರನ್ನು ರಕ್ಷಿಸಲು ಮುಂದಾದ ಜಗನ್ನಾಥ ನಾಯ್ಕ ಮಹಾಬಲೇಶ್ವರ ಅವರ ಮನೆಯನ್ನು ಸೇರಿದ್ದರೆ, ಅದೇ ಸಂದರ್ಭದಲ್ಲಿ ಮಾಬ್ಲೇಶ್ವರ ಅವರ ಮನೆಯೊಳಗೆ ನುಗ್ಗಿದ ಚಿರತೆ ಅಲ್ಲಿಯೇ ಅವಿತುಕೊಂಡಿದೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಪ್ರಾಣಭಯದಿಂದ ಅದರೊಳಗಿದ್ದವರು ಪಕ್ಕದ ಕೋಣೆ ಸೇರಿದರು. ಮನೆಯ ಕಿಟಕಿಯ ಬಳಿಗೆ ಬಂದ ಚಿರತೆ ಆರ್ಭಟ ಮುಂದುವರೆಸಿತ್ತು ಎಂದು ಅವರು ಹೇಳಿದ್ದಾರೆ.

ಇನ್ನು ಚಿರತೆ ಅವಿತುಕುಳಿತ ಮನೆಯ ಸುತ್ತ ಮುತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಗಿ ಭದ್ರತೆ ಕಲ್ಪಿಸಿದ್ದರು. ಮನೆಯ ಹಿಂಬದಿಗೆ ಗೋಡೆ ಕೊರೆದು, ಮನೆಯ ಬಾಗಿಲಿಗೆ ಬಲೆ ಹಾಕಿ ಶುಕ್ರವಾರ ತಡರಾತ್ರಿವರೆಗೂ ಚಿರತೆಯನ್ನು ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಫಲ ನೀಡದ ನಂತರದಲ್ಲಿ ಅರವಳಿಕೆ ತಜ್ಞರನ್ನು ಕರೆಸಲು ನಿರ್ಧರಿಸಿ ಅರವಳಿಕೆ ತಜ್ಞರನ್ನು ಸಂಪರ್ಕಿಸಲಾಗಿದೆ. ಅರವಳಿಕೆಯ ತಜ್ಞರು ಶಿವಮೊಗ್ಗದಿಂದ ಬಂದು ಕಾರ್ಯಾಚರಣೆ ನಡೆಸಬೇಕಿದ್ದ ಹಿನ್ನೆಲೆಯಲ್ಲಿ ಕೊಂಚ ಸಮಯ ವಿಳಂಬವಾಗಿದೆ.

ಚಿರತೆ ಮನೆಯೊಳಗಿದ್ದ ದೃಶ್ಯವನ್ನು ಸಿ.ಸಿ ಟಿವಿ ಅಳವಡಿಸುವ ಮೂಲಕ ಸೆರೆಹಿಡಿಯಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ತಾಲೂಕಿನ ವಿವಿಧಡೆಯಿಂದ ಬಂದ ಜನರು ಚಿರತೆಯನ್ನು ನೋಡುವುದಕ್ಕೆ ಮುಗಿದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಶನಿವಾರ ಸಂಜೆ 5:30 ಕ್ಕೆ ಅರವಳಿಕೆ ತಜ್ಞರ ತಂಡ ಶಿವಮೊಗ್ಗದಿಂದ ಆಗಮಿಸಿ, ಚಿರತೆಗೆ ಅರವಳಿಕೆ ಮದ್ದು ಫೈರ್​ ಮಾಡಿ, ಅದನ್ನು ಪ್ರಜ್ಞೆತಪ್ಪಿಸಿ ನಂತರ ಬೋನಿನೊಳಗೆ ತುಂಬಿ ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಜಗನ್ನಾಥ ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹಾಗೂ ಕಾಂಗ್ರೆಸ ಮುಖಂಡ ರತ್ನಾಕರ ನಾಯ್ಕ ಇನ್ನಿತರರು ಪಾಲ್ಗೊಂಡಿದ್ದರು.

ಸಿಎಫ್ ವಸಂತ ರೆಡ್ಡಿ ಕೆ.ವಿ ಮಾರ್ಗದರ್ಶನ, ಡಿಎಫ್ಓ ಯೋಗೇಶ ಸಿ.ಕೆ ನೇತೃತ್ವದಲ್ಲಿ ಎಸಿಎಫ್ ಲೋಹಿತ್ ಜಿ, ಆರ್.ಎಫ್.ಓ ಎಸ್.ಟಿ. ಪಟಗಾರ, ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಹೂವಣ್ಣ ಗೌಡ, ಸಂಗಮೇಶ, ರಾಘವೇಂದ್ರ, ಮಾನಸ ನಾಯ್ಕ, ವೀಣಾ ನಾಯ್ಕ, ವನ್ಯಜೀವಿ ಸಂರಕ್ಷಕರಾದ ಅಶೋಕ ನಾಯ್ಕ, ಸಿ.ಆರ್.ನಾಯ್ಕ, ಪವನ ನಾಯ್ಕ, ಬಸವನಗೌಡ ಬಗಲಿ, ವಾಹನ ಚಾಲಕ ಸದಾನಂದ ನಾಯ್ಕ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಅಧಿಕಾರಿಗಳ ಬಗ್ಗೆ ಜನರ ಅಸಮಾಧಾನ

ಸಂಜೆ ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರು ಕಾದುಕಾದು ಹೈರಾಣಾದರು. ಒಂದಿಷ್ಟು ಜನ ಬೇಸರಗೊಂಡು ತಮ್ಮತಮ್ಮ ಮನೆಗಳಿಗೆ ವಾಪಾಸಾದರು. ಇನ್ನೂ ಅನೇಕರು ಊಟ, ನಿದ್ದೆ ಬಿಟ್ಟು ಮನೆಯ ಜಗುಲಿಯಲ್ಲಿ ಕುಳಿತು ತಮ್ಮ ಅಸಮಾಧಾನ ಹೊರಹಾಕಿದರು. ಶನಿವಾರ ಸಂಜೆಯಾದರೂ ಕಾರ್ಯಾಚರಣೆ ಮುಗಿಯದ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು. ಒಂದು ಮನೆಯಲ್ಲಿ ಚಿರತೆ ಬಂದಿಯಾಗಿ 24 ಗಂಟೆ ಕಳೆದರೂ ಅಧಿಕಾರಿಗಳು ಅದನ್ನು ಹಿಡಿಯಲು ಸಾಧ್ಯವಾಗದಿದ್ದ ಬಗ್ಗೆ ಸುತ್ತಲ ಅನೇಕರು ಬೇಸರ ವ್ಯಕ್ತಪಡಿಸಿ, ನಮ್ಮ ನಮ್ಮ ಮನೆ ಬಿಟ್ಟು ಒಂದು ದಿನವೇ ಕಳೆದಿದೆ, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!