ಹೊಸದಿಗಂತ ವರದಿ ಮಂಗಳೂರು :
ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಮಂಗಳೂರು-ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಮತ್ತೆ ಆರಂಭವಾಗಿದೆ.
ಕೋವಿಡ್ ನಂತರ ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಷಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಗಿದೆ.
ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಬಂದಿಳಿದಿದ್ದಾರೆ. ಮಾಜಿ ಶಾಸಕ ಜೆ.ಆರ್.ಲೋಬೊ, ಟಿ.ಕೆ. ಸುಧೀರ್ ಮತ್ತಿತರರು ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಲಿದೆ.
ಕೊರೊನಾ ಸಂಕಷ್ಟಕ್ಕಿಂತ ಮೊದಲು ಮಂಗಳೂರು – ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಸಂಚಾರ ನಡೆಸುತ್ತಿತ್ತು. ಆದರೆ, ಕಳೆದ 4 ವರ್ಷಗಳಿಂದ ಇದು ಸ್ಥಗಿತಗೊಂಡಿತ್ತು. ಸಾಮಾನ್ಯ ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳು ಬೇಕಿದೆ. ಆದರೆ ಈ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ.