ಹೊಸದಿಗಂತ ಡಿಜಿಟಲ್ ಡೆಸ್ಕ್
9 ವರ್ಷ 3 ತಿಂಗಳ ಬಳಿಕ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕುಮಾರ್ ಕಾರ್ತಿಕೇಯ ತಮ್ಮ ಮನೆಗೆ ವಾಪಾಸ್ಸಾಗಿದ್ದಾರೆ .
ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
9 ವರ್ಷ 3 ತಿಂಗಳ ಬಳಿಕ ನಾನು ನನ್ನ ಕುಟುಂಬ ಹಾಗೂ ನನ್ನ ತಾಯಿಯನ್ನು ಭೇಟಿ ಮಾಡಿದೆ. ನನ್ನ ಭಾವನೆಗಳನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರ್ ಕಾರ್ತಿಕೇಯ ಟ್ವೀಟ್ ಮಾಡಿದ್ದಾರೆ.
ಕುಮಾರ್ ಕಾರ್ತಿಕೇಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡಾ ಈ ಫೋಟೋವನ್ನು ಹಂಚಿಕೊಂಡಿದ್ದು, ಇದನ್ನೇ ಅಲ್ವಾ ಪರಿಪೂರ್ಣವಾಗಿ ಮನೆಗೆ ಬರುವುದು ಎಂದರೇ ಎಂದು ಟ್ವೀಟ್ ಮಾಡಿದೆ.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕುಮಾರ್ ಕಾರ್ತಿಕೇಯ ಮುಂಬೈ ಇಂಡಿಯನ್ಸ್ ಪರ 4 ಪಂದ್ಯಗಳನ್ನಾಡಿ 5 ವಿಕೆಟ್ ಹಾಗೂ 3 ರನ್ ಗಳಿಸಿದ್ದಾರೆ.
Met my family and mumma ❤️ after 9 years 3 months . Unable to express my feelings 🤐#MumbaiIndians #IPL2022 pic.twitter.com/OX4bnuXlcw
— Kartikeya Singh (@Imkartikeya26) August 3, 2022
ಕುಮಾರ್ ಕಾರ್ತಿಕೇಯ ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮಧ್ಯ ಪ್ರದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಎನಿಸಿದ್ದರು. 2022ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕುಮಾರ್ ಕಾರ್ತಿಕೇಯ 11 ಇನಿಂಗ್ಸ್‌ಗಳಿಂದ 32 ವಿಕೆಟ್ ಕಬಳಿಸುವ ಮೂಲಕ ಮಧ್ಯಪ್ರದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದರು.
ಕ್ರಿಕೆಟ್ನಲ್ಲಿ ಏನನ್ನಾದರೂ ಸಾಧಿಸಲೇಬೇಕು ಅನ್ನುವ ಛಲದಿಂದ 2014ರಲ್ಲೇ ಕುಮಾರ್ ಕಾರ್ತಿಕೇಯ ಮನೆ ತೊರೆದಿದ್ದರು. 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿರಲಿಲ್ಲ. ಕುಟುಂಬದವರು ಮನೆಗೆ ಬಾ ಎಂದ್ರೂ ಆ ಕಡೆಗೆ ಒಮ್ಮೆಯೂ ತಿರುಗಿ ನೋಡಿರಲಿಲ್ಲ. ಈ ಸತ್ಯವನ್ನು ವೇಗಿ ಕುಮಾರ್ ಕಾರ್ತಿಕೇಯ ಕೆಲ ದಿನಗಳ ಹಿಂದಷ್ಟೇ ಹಂಚಿಕೊಂಡಿದ್ದರು.
‘ನಾನು ಕಳೆದ ಒಂಬತ್ತು ವರ್ಷದಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವೇ ಹೋಗಲು ನಿರ್ಧರಿಸಿದ್ದೇ. ತಂದೆ-ತಾಯಿ ಆಗಾಗ ಪೋನ್ ಮಾಡಿ ಕರೆಯುತ್ತಿದ್ದರು. ಆದರೂ ಹೋಗಲಿಲ್ಲ. ಕೊನೆಗೆ ಐಪಿಎಲ್‌ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದೇನೆ.’ಎಂದು ಮುಂಬೈ ಇಂಡಿಯನ್ಸ್ತಂಡದ ಎಡಗೈ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಕಳೆದ ಮೇ ತಿಂಗಳಿನಲ್ಲಿ ಹೇಳಿದ್ದರು.