ಸಿದ್ದರಾಮಯ್ಯ ಅಲ್ಲ, ಬಿದ್ದರಾಮಯ್ಯ: ಸಚಿವ ಶ್ರೀರಾಮುಲು ಲೇವಡಿ

ಹೊಸದಿಗಂತ ವರದಿ , ಬಳ್ಳಾರಿ:

ಮಾಜಿ ಸಿ.ಎಂ. ಸಿದ್ದರಾಮಯ್ಯ ಅವರು ಈಗ ಎದ್ದರಾಮಯ್ಯ ಅಲ್ಲ, ಅವರು ಬಿದ್ದರಾಮಯ್ಯ ಎಂದು ಸಾರಿಗೆ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವ್ಯಂಗವಾಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಬ್ಬರೂ ತಬ್ಬಿಕೊಂಡು, ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ ಎಂದು ಮೇಲ್ನೋಟಕ್ಕೆ ಸಾಬೀತು ಪಡಿಸಿದರು. ಆದರೇ, ಒಳಗಿನ ಅರ್ಥವೇ ಬೇರೆ ಇದೆ. ಇವರಿಬ್ಬರಂತೆ ಕಾಂಗ್ರೆಸ್ ನ ನಾನಾ ನಾಯಕರು ಎಲ್ಲೆಲ್ಲಿ ಅಪ್ಪಿಕೊಂಡಿದ್ದಾರೋ ಅಲ್ಲಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಅದರಂತೆ ರಾಜ್ಯದಲ್ಲೂ ಕಾಂಗ್ರೆಸ್ ಮೂಲೆಗುಂಪಾಗಲಿದೆ ಎಂದರು.  ಡಿಕೇಶಿ ಹಾಗೂ ಸಿದ್ದರಾಮಯ್ಯ ಅವರಿಬ್ಬರ ಅಧಿಕಾರದ ಕಿತ್ತಾಟದ ಕುರಿತು ತೀರ್ಪು ನೀಡಲು‌ ದೇಹಲಿಯಿಂದ ಬಂದಿದ್ದ ಅಂಪೈರ್ ಗೆ ಯಾರನ್ನು ಔಟ್ ಮಾಡ್ಬೇಕು, ಯಾರನ್ನು ಇನ್ ಮಾಡಬೇಕು ಎಂಬುದು ಗೊತ್ತಾಗದೇ ಗೊಂದಲಕ್ಕೀಡಾಗಿದ್ದಾರೆ ಎಂದರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಜನ್ಮದಿನ ಸಮಾರಂಭ ಅಲ್ಲ, ಅದು ಕಾಂಗ್ರೆಸ್ ‌ಮತಬೇಟೆಯ ಸಮಾರಂಭ, ಚುನಾವಣೆ ಮುಂದಿಟ್ಟುಕೊಂಡು ಆಯೋಜಿಸಿದ್ದ ಪ್ರಚಾರ ಸಭೆ ಅದು. ದಾಖಲೆ‌ ಮಟ್ಟದಲ್ಲಿ ಜನರು ಸೇರಿದ್ದಾರೆ ಎಂದು ಹೇಳಲಾಗ್ತಿದೆ, ನಾವೂ ಹಿಂದೆ ಇಂತಹ ಸಮಾರಂಭಗಳನ್ನು ಆಯೋಜಿಸಿದ್ದೆವು. ಇವರು ಸೇರಿಸಿದ ಜನಕ್ಕಿಂತ ಹತ್ತುಪಟ್ಟು ಹೆಚ್ಚು ಜನರನ್ನು ಜಮಾಯಿಸುತ್ತೇವೆ, ಈ ಹಿಂದೆ ಇಂತಹ ಕಾರ್ಯಕ್ರಮವನ್ನು ಸಾಕಷ್ಟು ಆಯೋಜಿಸಿದ್ದೇವೆ ಎಂದರು. ಸಿದ್ದರಾಮಯ್ಯ ಅವರು ಹಿರೀಯ ರಾಜಕಾರಣಿಗಳು, ರಾಜಕಾರಣ ಬೇರೆ, ಸ್ನೇಹ, ಬಾಂಧ್ಯವ್ಯ ಬೇರೆ, ಸಿದ್ದರಾಮಯ್ಯ ಅವರು ನೂರುಕಾಲ ಬಾಳಲಿ, ದೇವರು ಅವರಿಗೆ ನೂರುಕಾಲ ಆರೋಗ್ಯ ಆವಿಷ್ಯ ನೀಡಲಿ, ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಚಿವ ಸಿ.ಸಿ. ಪಾಟೀಲ್, ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!