ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಯುವತಿಯರ ಮೇಲೆ ಹಲ್ಲೆ ಕಿರುಕುಳದ ಪ್ರಕರಣಗಳು ಪದೇ ಪದೆ ನಡೆಯುತ್ತಿರುವುದು ಸಾಮಾನ್ಯ ವಿಷಯದಂತಾಗಿ ಹೋಗಿದೆ. ಮೊನ್ನೆಯಷ್ಟೇ ಬಿಹಾರದ ಜಮಯಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು ಇದೀಗ ಅಂತಹುದೇ ಘಟನೆಯೊಂದು ಬಾಂಕಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಂದಾರ ಪರ್ವತದಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 22ರಂದು ವಾಟ್ಸ್ಆ್ಯಪ್ ಮೂಲಕ ಈ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ವಿಡಿಯೋದಲ್ಲಿರುವ ಘಟನೆ ಜೂನ್ 3ರಂದು ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮಂದಾರ ಪರ್ವತಕ್ಕೆ ಇಬ್ಬರು ಸ್ನೇಹಿತರೊಂದಿಗೆ ತೆರಳಿದ್ದ ಯುವತಿಯನ್ನು ಮೂವರು ಯುವಕರು ತಡೆದು ನಿಂದಿಸಿ, ಬೆದರಿಕೆ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿಗಳ ಗುರುತು ಪತ್ತೆ
ಈ ಪ್ರಕರಣದಲ್ಲಿ ಅಬ್ದುಲ್ಲಾ, ನಿತೀಶ್ ಕುಮಾರ್ ರೈ ಮತ್ತು ವಿಕಾಸ್ ಕುಮಾರ್ ಎಂಬ ಮೂವರನ್ನು ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಯುವತಿಯ ಸ್ನೇಹಿತರೊಬ್ಬರಿಂದ ಆನ್ಲೈನ್ ಮೂಲಕ 1,500 ಹಣ ವರ್ಗಾಯಿಸಿಕೊಂಡ ಬಳಿಕ ಅವರನ್ನು ಅಲ್ಲಿಂದ ತೆರಳಲು ಬಿಡಲಾಗಿದೆ ಎಂಬ ಆರೋಪವೂ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿರುವವರ ವಿರುದ್ಧವೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಯುವತಿಯ ಗುರುತು ಬಹಿರಂಗಪಡಿಸಲು ಪ್ರಯತ್ನಿಸಿದವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಇದಕ್ಕೂ ಮುನ್ನ ಜಮಯಿಯಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸ್ನೇಹಿತನಿಗೆ ಗುಂಪೊಂದು ಕಿರುಕುಳ ನೀಡಿದ ಆರೋಪದ ವಿಡಿಯೋ ವೈರಲ್ ಆಗಿತ್ತು. ನಂತರ ಸಮಸ್ತಿಪುರದಲ್ಲೂ ಯುವತಿಗೆ ಗುಂಪೊಂದು ಕಿರುಕುಳ ನೀಡಿದ ವಿಡಿಯೋ ಬೆಳಕಿಗೆ ಬಂದಿತ್ತು. ಎರಡೂ ಪ್ರಕರಣಗಳಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಒಂದೇ ವಾರದಲ್ಲಿ ಅಂತರದಲ್ಲಿ 3 ಪ್ರಕರಣ
ಒಂದೇ ವಾರದಲ್ಲಿ ಇಂತಹ ಮೂರು ಪ್ರಕರಣಗಳ ವಿಡಿಯೋಗಳು ಸಾರ್ವಜನಿಕ ಗಮನಕ್ಕೆ ಬಂದಿರುವುದು ಬಿಹಾರದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಸುರಕ್ಷತೆ, ಪ್ರವಾಸಿ ತಾಣಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ದೃಶ್ಯಗಳ ಪ್ರಸರಣದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಮಂದಾರ ಪರ್ವತ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಕಾನೂನು ಕ್ರಮದತ್ತ ಇದೀಗ ಪೊಲೀಸರ ಗಮನ ಕೇಂದ್ರೀಕೃತವಾಗಿದೆ.



