ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾರ್ಗಿಲ್ ವಿಜಯ ದಿವಸದಂದೇ ಉಗ್ರರಿಗೆ ಆಶ್ರಯ ನಡುತ್ತಿರುವ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಜಮ್ಮು-ಕಾಶ್ಮೀರ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಜಮ್ಮು-ಕಾಶ್ಮೀರದ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ (BSF) ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕೃತ್ಯಗಳು ಹೆಚ್ಚಾಗಿರುವ ಕಾರಣ ಹೆಚ್ಚಿನ ಭದ್ರತೆಗಾಗಿ ಬಿಎಸ್‌ಎಫ್ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಪಾಕ್‌ನಿಂದಲೂ ಹೆಚ್ಚುವರಿ ಸೈನಿಕರ ನಿಯೋಜನೆ
ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಮೋದಿ ಎಚ್ಚರಿಕೆ
ಕಾರ್ಗಿಲ್ ವಿಜಯ ದಿವಸಕ್ಕೆ ಜುಲೈ 26ಕ್ಕೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.