ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು, ಝರಾ ಪಟೇಲ್ ಎಂಬಾಕೆಯ ವಿಡಿಯೋಗೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ರಶ್ಮಿಕಾ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದು, ಎಲ್ಲಡೆ ವೈರಲ್ ಆಗಿ, ಸಾಕಷ್ಟು ಚರ್ಚೆಯಾಗುತ್ತಿದೆ.
ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣ ಬಳಸುವವರಿಗೆ ಕೆಲವೊಂದು ಕಾನೂನು ನಿಯಮಗಳನ್ನು ಸರ್ಕಾರ ನೆನಪು ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದು, ಡೀಪ್‌ಫೇಕ್‌ಗಳ ಮೇಲಿನ ಕಾನೂನು ನಿಬಂಧನೆಗಳು, ಅವುಗಳ ರಚನೆ ಮತ್ತು ಪ್ರಸಾರಗಳ ಮೇಲಿನ ದಂಡಗಳನ್ನು ಸಚಿವಾಲಯ ಒತ್ತಿಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಸೆಕ್ಷನ್ 66ಡಿ ಅನ್ನು ಸರ್ಕಾರದ ಉಲ್ಲೇಖಿಸಿದ್ದು, ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ ಮಾಡಿದರೆ ಅಂಥವರಿಗೆ ವಿಧಿಸುವ ಶಿಕ್ಷೆಯನ್ನು ಈ ಸೆಕ್ಷನ್ ಒಳಗೊಂಡಿದೆ.ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಗತಗೊಳಿಸುವ ಮೂಲಕ ವಂಚನೆ ಮಾಡಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ.
ಇನ್ನು ಮುಂದೆ ಯಾರೇ ಆಗಲಿ, ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ಅಥವಾ ಮಾನಹಾನಿ ಉಂಟು ಮಾಡುವಂತಹ ವಿಡಿಯೋಗಳನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಲ್ಲಿ, ಅಂಥವರು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.