ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ.
ಮತದಾನಕ್ಕೆಂದು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ನಿಂತಿದ್ದ ಮಹಿಳೆಯೊಬ್ಬರು, ತಮ್ಮ ಸರದಿ ಬಂದಾಗ ಒಳಕ್ಕೆ ಹೋಗಿದ್ದಾರೆ. ಮತದಾನ ಮಾಡಲು ಬಂದಾಗ ನೀವು ವೋಟರ್ಸ್ ಲಿಸ್ಟ್ ಪ್ರಕಾರ ನಿಮ್ಮ ಹೆಸರಿಲ್ಲ ಎಂದು ಹೇಳಿ ಸಿಬ್ಬಂದಿ ವಾಪಾಸ್ ಕಳುಹಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮಹಿಳೆ ಬಸಂತಿ ದೇವಿ ಮತದಾನಕ್ಕೆಂದು ಹೋಗಿದ್ದರು, ಆಗ ಮತದಾರರ ಪಟ್ಟಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಇದ್ದ ಕಾರಣ ಮತದಾನಕ್ಕೆ ಅವಕಾಶ ನೀಡಿಲ್ಲ.
ಧುಪಗುರಿ ಪುರಸಭೆಯ 7ನೇ ವಾರ್ಡ್‌ನಲ್ಲಿನ ಪ್ರೌಢಶಾಲೆಯೊಂದರಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವುದರಿಂದ ಮತ ಹಾಕಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದ್ದಾರೆ.
ನಾನು ಏಳೂವರೆ ಗಂಟೆಗೆ ಮತ ಹಾಕಲು ಹೋಗಿದ್ದೆ, ಆದರೆ, ಬಹಳ ಹೊತ್ತು ಸರದಿಯಲ್ಲಿ ನಿಂತಿದ್ದರೂ ಮತದಾನ ಮಾಡಲು ಸಾಧ್ಯವಾಗಿಲ್ಲ, ಸರ್ಕಾರದ ದಾಖಲೆಯಲ್ಲಿ ಹೆಸರಿಲ್ಲ ಎಂದು ಹೇಳಿದ್ದಾರೆ, ಜಿಲ್ಲಾಧಿಕಾರಿ ಕಚೇರಿಗೂ ಕರೆ ಮಾಡಿದೆ ಆದರೆ ಈಗ ಮನೆಗೆ ಹೋಗಿ ಎಂದು ಹೇಳಿದರು ನಾನು ಸತ್ತಂತೆಯೇ ಭಾಸವಾಗುತ್ತಿದೆ ಎಂದು ಬಸಂತಿ ದೇವಿ ಕಣ್ಣೀರು ಹಾಕಿದರು.