ಯೋಗದ ನಂತರ ಈಗ ಜಾಗತಿಕವಾಗಿ ಪರಿಚಯವಾಗಲಿದೆ ʼರಾಗಿʼ- ವಿಶ್ವ ಆಹಾರ ಭಾರತ 2023 ಮೇಳದಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯೋಗದ ನಂತರ ಪೌಷ್ಟಿಕಾಂಶ ಭರಿತ ಒರಟಾದ ಧಾನ್ಯ ʼರಾಗಿʼ ಪ್ರಪಂಚದ ಮೂಲೆ ಮೂಲೆಯನ್ನು ತಲುಪಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂಟಪದಲ್ಲಿ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ಆಯೋಜಿಸಿರುವ ಮೂರು ದಿನಗಳ ಕಾಲ ನಡೆಯುವ ಬೃಹತ್ ಆಹಾರ ಮೇಳ ‘ವರ್ಲ್ಡ್ ಫುಡ್ ಇಂಡಿಯಾ 2023’ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಯೋಗ ದಿನವು ಯೋಗವನ್ನು ಮೂಲೆ ಮೂಲೆಗೆ ಕೊಂಡೊಯ್ದ ರೀತಿಯಲ್ಲೇ ವಿಶ್ವದಲ್ಲಿ ರಾಗಿಯ ಬಗ್ಗೆ ಜಾಗೃತಿ ಅಭಿಯಾನ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತ ರಾಗಿಯನ್ನು ಪರಿಚಯಿಸಲಾಗುತ್ತದೆ ಎಂದರು.

ರಾಗಿಯನ್ನು ಎಲ್ಲ ಹವಾಮಾನದಲ್ಲೂ ಬೆಳೆಯಬಹುದು ಹಾಗಾಗಿ ರಾಗಿ ಸುರಕ್ಷಿತ ಬೆಳೆ. ಭಾರತವು ಒಂಬತ್ತು ರೀತಿಯ ರಾಗಿಯನ್ನು ಉತ್ಪಾದಿಸುತ್ತದೆ. ರಾಗಿಯನ್ನು ಸಾಮಾನ್ಯವಾಗಿ ನ್ಯೂಟ್ರಿ-ಸಿರಿಲ್ ಎಂದು ಕರೆಯಲಾಗುತ್ತದೆ. ಭಾರತದ ಹೆಚ್ಚಿನ ರಾಜ್ಯಗಳು ಒಂದು ಅಥವಾ ಹೆಚ್ಚಿನ ಜಾತಿಯ ರಾಗಿ ಬೆಳೆಯನ್ನು ಬೆಳೆಯುತ್ತವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ನಿರ್ಣಯಿಸಿದೆ ಮತ್ತು ಭಾರತದ ಈ ಪ್ರಸ್ತಾಪವನ್ನು 72 ದೇಶಗಳು ಬೆಂಬಲಿಸಿವೆ. ಅಲ್ಲದೆ ಈ ಮೇಳವು ಭಾರತವನ್ನು ‘ವಿಶ್ವದ ಆಹಾರ ಬುಟ್ಟಿ’ ಎಂದು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಭಾರತವು ಸಾಂಸ್ಕೃತಿಕ ವೈವಿಧ್ಯತೆ ಮಾತ್ರವಲ್ಲದೆ ಶ್ರೀಮಂತ ವೈವಿಧ್ಯಮಯ ಪಾಕಪದ್ಧತಿಗಳನ್ನು ಹೊಂದಿದೆ. ಈ ಆಹಾರ ವೈವಿಧ್ಯತೆಯು ಜಗತ್ತಿನಾದ್ಯಂತ ಹೂಡಿಕೆದಾರರಿಗೆ ಒಂದು ಅವಕಾಶವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಉದ್ಯೋಗಾವಕಾಶಗಳು ಕೂಡ ಹಚ್ಚಾಗಲಿದೆ ಎಂದರು.

ಆಹಾರ ಸಂಸ್ಕರಣಾ ವಲಯದಲ್ಲಿ, ಅದರ ಯಶಸ್ಸಿಗೆ ಮೂರು ಪ್ರಮುಖ ಅಂಶಗಳಿದ್ದು, ಸಣ್ಣ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಸಂಸ್ಕರಿಸಿದ ಆಹಾರದ ರಫ್ತು ಶೇಕಡಾ 150 ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಮೇಳದಲ್ಲಿ 200ಕ್ಕೂ ಹೆಚ್ಚು ಬಾಣಸಿಗರು ಭಾಗವಹಿಸಲಿದ್ದು, ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು ಪ್ರಸ್ತುತಪಡಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!