ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ಇಂದ್ರನ್ಸ್ ಎಲ್ಲರಿಗು ಚಿರಪರಿಚಿತ. ನಟನೆ ಮೂಲಕ ತನ್ನದೇ ಅದ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರು ಏಳನೇ ತರಗತಿ ಪರೀಕ್ಷೆ ಬರೆದು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇಂದ್ರನ್ಸ್ ಸಾಬೀತುಪಡಿಸಿದ್ದಾರೆ. ತನ್ನ 68ನೇ ವಯಸ್ಸಿನಲ್ಲಿ 7ನೇ ತರಗತಿ ಪರೀಕ್ಷೆ ಬರೆದಿದ್ದಾರೆ.
ಕೇರಳದ ಅಟ್ಟಕುಳಂಗರ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆದರು. ಎಲ್ಲ ವಿದ್ಯಾರ್ಥಿಗಳಂತೆ ಇವರಿಗೂ ಪರೀಕ್ಷೆ ಎಂದರೆ ಭಯ. ಆದರೆ, ಆ ಭಯವನ್ನು ಬಿಟ್ಟು ಪರೀಕ್ಷೆ ಎದುರಿಸಿದ್ದಾರೆ.
ಅನಿವಾರ್ಯ ಪರಿಸ್ಥಿತಿಗಳಿಂದಾಗಿ ನಾಲ್ಕನೇ ತರಗತಿಯಲ್ಲೇ ಶಾಲೆ ತೊರೆದ ಇಂದ್ರನ್ಸ್ ಜೀವನೋಪಾಯಕ್ಕಾಗಿ ಟೈಲರಿಂಗ್ ಕಲಿತರು.ಟೈಲರಿಂಗ್ ಬಳಿಕ ಇಂದ್ರನ್ಸ್ ಅವರು ಸಿನಿಮಾ ಇಂಡಸ್ಟ್ರಿಯತ್ತ ಕಾಲಿಟ್ಟರು. ಆದ್ದರಿಂದ ಅವರ ಓದುವ ಕನಸು ಕನಸಾಗಿಯೇ ಉಳಿಯಿತು.
ಸಿನಿಮಾ ಕ್ಷೇತ್ರದಲ್ಲೂ ಯಶಸ್ಸು ಪಡೆದಿರುವ ಇಂದ್ರನ್ಸ್ ಅವರಿಗೆ ಇದೀಗ ಓದುವ ಆಲೋಚನೆ ಹುಟ್ಟಿಕೊಂಡಿದೆ. ಹೀಗಾಗಿ ಪುಸ್ತಕಗಳನ್ನು ಖರೀದಿಸಿ ಅಧ್ಯಯನಗಳಲ್ಲಿ ತೊಡಗಿದ್ದಾರೆ. ಆದರೆ, ಕೇರಳದಲ್ಲಿ ನೇರವಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. 7 ಮತ್ತು 10ನೇ ತರಗತಿ ಪಾಸಾಗಿರಬೇಕು. ಸದ್ಯ ಇಂದ್ರನ್ಸ್ ಅವರು ಏಳನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ. ಸದ್ಯ ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳ ಫಲಿತಾಂಶವನ್ನು ಇನ್ನೆರಡು ವಾರಗಳಲ್ಲಿ ಪ್ರಕಟಿಸಲಾಗುತ್ತದೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗೆ ಇಂದ್ರನ್ಸ್ ತಯಾರಿ ನಡೆಸಲಿದ್ದಾರೆ.
ಇಂದ್ರನ್ ಅವರು 10ನೇ ತರಗತಿಯನ್ನು ತಲುಪಿದಾಗ, ಅವರನ್ನು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗುತ್ತದೆ. ಅವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಸಾಕ್ಷರತಾ ಮಿಷನ್ ಈಗಾಗಲೇ ಸಿದ್ಧತೆ ನಡೆಸಿದೆ. ಈ ಬಗ್ಗೆ ನಿರ್ದೇಶಕಿ ಎ.ಜಿ.ಒಲಿನಾ ಮಾತನಾಡಿ, ಇಂದ್ರನ್ಸ್ ಅವರ ಅಪಾರವಾದ ಶಿಕ್ಷಣದ ಒಲವು ಸಾಮಾನ್ಯ ಜನರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.