ನಿತ್ಯಾನಂದನ ಕೈಲಾಸದೊಂದಿಗೆ ಒಪ್ಪಂದ: ಕೆಲಸ ಕಳೆದುಕೊಂಡ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದಕ್ಷಿಣ ಅಮೆರಿಕದ ಪರಾಗ್ವೆಯ ಹಿರಿಯ ಸರ್ಕಾರಿ ಅಧಿಕಾರಿ ಅಸ್ತಿತ್ವದಲ್ಲಿಲ್ಲದ ದೇಶದೊಂದಿಗೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿ ಅಧಿಕಾರ ಕಳೆದುಕೊಂಡಿದ್ದಾರೆ.

ಹೌದು,ಭಾರತದಿಂದ ತಲೆಮರೆಸಿಕೊಂಡಿರುವ ಸ್ವಾಮಿ ನಿತ್ಯಾನಂದನ ಕಪೋಕಲ್ಪಿತ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಅಧಿಕೃತ ದೇಶವೆಂದು ತಿಳಿದುಕೊಂಡು ಅಧಿಕಾರಿ ಅಲ್ಲಿನ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರ ಜತೆ ಮಾತುಕತೆ ನಡೆಸಿದ್ದಾರೆ.

ದಕ್ಷಿಣ ಅಮೆರಿಕದ ದ್ವೀಪವಾದ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದಿಂದ ಬಂದಿದ್ದೇವೆ ಎಂದು ಹೇಳಿಕೊಂಡವರ ಮಾತಿಗೆ ಮರುಳಾಗಿ ಒಪ್ಪಂದಕ್ಕೆ ಸಹಿ ಹಾಕಿ ಕೆಲಸ ಕಳೆದುಕೊಂಡಿರುವುದಾಗಿ ಪೆರಗ್ವೆ ಹಿರಿಯ ಕೃಷಿ ಅಧಿಕಾರಿ ಅರ್ನಾಲ್ಡೋ ಚಾಮೊರೊ ತಿಳಿಸಿದರು.

‘ಕೈಲಾಸದ ಅಧಿಕಾರಿಗಳು ಎಂದು ಹೇಳಿಕೊಂಡವರು ನಮ್ಮಲ್ಲಿಗೆ ಬಂದು, ಪೆರಗ್ವೆಗೆ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದರು. ಈ ಸಂಬಂಧ ಹಲವು ಯೋಜನೆಗಳನ್ನು ಪ್ರಸ್ತುತಪಡಿಸಿದರು. ನಾವು ಅವರ ಮಾತನ್ನು ಆಲಿಸಿದ್ದಷ್ಟೇ ಅಲ್ಲ, ಒಪ್ಪಿಕೊಂಡೆವು’ ಎಂದು ಅರ್ನಾಲ್ಡೊ ಒಪ್ಪಿಕೊಂಡಿದ್ದಾರೆ. ಈ ನಕಲಿ ಅಧಿಕಾರಿಗಳು ಕೃಷಿ ಸಚಿವ ಕಾರ್ಲೊಸ್ ಗಿಮೆನೆಜ್‌ರನ್ನು ಕೂಡ ಭೇಟಿ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

ಕೈಲಾಸ ಮತ್ತು ಪೆರಗ್ವೆಯ ನಡುವೆ ರಾಜತಾಂತ್ರಿಕ ಸಂಬಂಧ ಬೆಳೆಸುವ ಉದ್ದೇಶವನ್ನು ಎರಡೂ ನಿಯೋಗಗಳು ಸಹಿ ಹಾಕಿರುವ ಒಡಂಬಡಿಕೆಯಲ್ಲಿ ಪ್ರತಿಪಾದಿಸಲಾಗಿದೆ. ಸಚಿವಾಲಯದ ಲೆಟರ್ ಹೆಡ್ ಮತ್ತು ಅಧಿಕೃತ ಸೀಲ್ ಹೊಂದಿರುವ ದಾಖಲೆಯಲ್ಲಿ ಅರ್ನಾಲ್ಡೊ ಅವರು, ‘ಗೌರವಾನ್ವಿತ ನಿತ್ಯಾನಂದ ಪರಮಶಿವನ್, ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಸಾರ್ವಭೌಮ’ ಎಂದು ನಿತ್ಯಾನಂದನನ್ನು ಸಂಬೋಧಿಸಿದ್ದಾರೆ. ‘ಹಿಂದೂಯಿಸಂ, ಮನುಕುಲ ಹಾಗೂ ರಿಪಬ್ಲಿಕ್ ಆಫ್ ಪೆರಗ್ವೆಗೆ ನಿತ್ಯಾನಂದ ನೀಡಿರುವ ಕೊಡುಗೆಗಳನ್ನು’ ಅವರು ಶ್ಲಾಘಿಸಿದ್ದಾರೆ.

ಪೆರಗ್ವೆ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಜತೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಯನ್ನು ಸಕ್ರಿಯವಾಗಿ ಅನ್ವೇಷಿಸುತ್ತದೆ. ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳಿಂದ ಸಾರ್ವಭೌಮ ರಾಷ್ಟ್ರವೆಂದು ಅದನ್ನು ಗುರುತಿಸಲು ತನ್ನ ಒಪ್ಪಿಗೆಯನ್ನು ಬೆಂಬಲಿಸುತ್ತದೆ’ ಎಂದು ಒಡಂಬಡಿಕೆಯಲ್ಲಿ ಹೇಳಲಾಗಿದೆ.

ಈ ಹಿಂದೆ ನಿತ್ಯಾನಂದನ ಮಹಿಳಾ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ, ಭಾರತದ ವಿರುದ್ಧ ಮಾತನಾಡಿದ್ದು ಸುದ್ದಿಯಾಗಿತ್ತು. ಕೈಲಾಸ ತನ್ನದೇ ಪಾಸ್‌ಪೋರ್ಟ್ ಮತ್ತು ರಿಸರ್ವ್ ಬ್ಯಾಂಕ್ ಹೊಂದಲಿದೆ ಎಂದು ‘ಕೈಲಾಸ’ದ ವೆಬ್‌ಸೈಟ್ ತಿಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!