ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿ ಅಗ್ರಿ ಸ್ಟಾರ್ಟ್‌ಅಪ್ ಸಮಾವೇಶ

ಹೊಸದಿಗಂತ ವರದಿ ಬಾಗಲಕೋಟೆ:

ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿ ಅಕ್ಟೋಬರ 18 ರಿಂದ 20 ವರೆಗೆ ಮೂರು ದಿನಗಳ ಕಾಲ ಅಖಿಲ ಭಾರತ ಅಗ್ರಿ ಸ್ಟಾರ್ಟ್‌ಅಪ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ತಿಳಿಸಿದರು.

ತೋ.ವಿವಿಯ ಪ್ರೇಕ್ಷಾ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ 18 ರಂದು ಬೆಳಿಗ್ಗೆ 10.30ಕ್ಕೆ ಜರಗುವ ಕಾರ್ಯಕ್ರಮವನ್ನು ಭಾರತೀಯ ಅನುಸಂಧಾನ ಕೃಷಿ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೋಟಗಾರಿಕೆ ಸಚಿವ ಎನ್.ಮುನಿರತ್ನ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಶಾಸಕ ವೀರಣ್ಣ ಚರಂತಿಮಠ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಅಕ್ಟೋಬರ 20 ರಂದು ಮಧ್ಯಾಹ್ನ 3 ಗಂಟೆಗೆ ಜರಗುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಹೈದರಾಬಾದ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ನೀರಜಾ ಪ್ರಭಾಕರ, ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಹನಮಂತ ನಿರಾಣಿ ಭಾಗವಹಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ತೋವಿವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್, ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ, ಸಾಂಸ್ಥಿಕ ಅಬಿವೃದ್ದಿ ಯೋಜನೆ ಅಡಿಯಲ್ಲಿ ಉದ್ಯಮಶೀಲ ಸಾಮಥ್ರ್ಯ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ನವೀನ ಶಿಕ್ಷಣ ವಿನ್ಯಾಸಗಳು ಎಂಬ ಯೋಜನೆಯು ವಿಶ್ವಬ್ಯಾಂಕ್‍ನಿಂದ 657.42 ಲಕ್ಷಗಳ ಅನುದಾನದೊಂದಿಗೆ ಬಾಗಲಕೋಟೆ ತೋಟಗಾರಿಕೆ ವಿವಿಗೆ ಮಂಜೂರಾಗಿರುವುದಾಗಿ ತಿಳಿಸಿದರು.

ಅಗ್ರಿ ಸ್ಟಾರ್ಟ-ಅಪ್‍ಗಳು ಕೃಷಿಯೇತರ ವೃತ್ತಿಪರರಿಂದ ಪ್ರಾಬಲ್ಯ ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆ ಪದವೀಧರರನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತಾ ಕೌಶಲ್ಯಾಭಿವೃದ್ದಿ ಕಡೆಗೆ ಒಲವು ಮೂಡಿಸುವಂತೆ ಚಟುವಟಿಕೆ ಕೈಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ. ಮೂರು ದಿನಗಳ ಸಮಾವೇಶದಲ್ಲಿ ಪ್ರದರ್ಶನ ಮಳಿಗೆ ಹಾಗೂ ಕೃಷಿ ಸ್ಟಾರ್ಟಅಪ್‍ಗಳಿಗೆ ಫಾರ್ಮ ಇನ್‍ಪುಟ್‍ಗಳು-ಅವಕಾಶಗಳು ಮತ್ತು ಸವಾಲುಗಳು, ಹೊಸ ಯುಗದ ಕೃಷಿಕರಿಗೆ ಹೈಟೆಕ್ ಕೃಷಿ, ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ, ತೋಟದಿಂದ ತಟ್ಟಿಗೆ, ಯಾಂತ್ರೀಕರಣ ಮತ್ತು ಸ್ವಯಂ ಚಾಲಿತ ಯಾಂತ್ರಿಕ ವ್ಯವಸ್ಥೆ ಹಾಗೂ ಅಗ್ರಿ-ಸ್ಟಾರ್ಟಅಪ್‍ಗಳಿಗಾಗಿ ಮಾರುಕಟ್ಟೆ ಸಂಪರ್ಕಗಳು ಮತ್ತು ನೆಟ್‍ವರ್ಕಿಂಗ್ ಅಂಶಗಳು ಮತ್ತು ಅನುದಾನ ಕುರಿತು 6 ತಾಂತ್ರಿಕ ಅಧಿವೇಶನಗಳು ಒಳಗೊಂಡಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!