ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಕಾವೇರಿ ನದಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೈಸೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ನಿ ಜೊತೆಗೆ ವಾಸವಾಗಿದ್ದ ಅಯ್ಯಪ್ಪನ್, ಮೇ 07 ರಂದು ಮನೆಯಿಂದ ನಾಪತ್ತೆಯಾಗಿದ್ದರು, ಹೀಗಾಗಿ ಕುಟುಂಬಸ್ಥರು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಿನ್ನೆ ಸಂಜೆ ನದಿಯಲ್ಲಿ ಅಪರಿಚಿತ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸ್ಥಳಕ್ಕೆ ಬಂದು ಶವ ಮೇಲೆ ತೆಗೆದು ನೋಡಿದಾಗ ಅಯ್ಯಪ್ಪನ್ ಗುರುತು ಪತ್ತೆ ಆಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ಅವರು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.