ಹೊಸದಿಗಂತ ವರದಿ, ರಾಯಚೂರು:
ಕೃಷಿ ಕ್ಷೇತ್ರ ಭಾರತದ ಆರ್ಥಿಕ ವ್ಯವಸ್ಥೆಯ ಆಧಾರ ಸ್ಥಂಭವಾಗಿದೆ. ಈ ಕ್ಷೇತ್ರ ದೇಶದ ಜಿಡಿಪಿ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಮಹತ್ವದ ಕೊಡುಗೆಯನ್ನು ನೀಡುತ್ತಿದೆ ಎಂದು ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಗುರುವಾರ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಜರುಗಿದ ೧೩ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಮತ್ತು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸಿರಿ ಧಾನ್ಯಗಳ ಅಭಿವೃದ್ಧಿಗೆ ಈ ವಿವಿ ಮಹತ್ವ ಕೊಡುಗೆಯನ್ನು ನೀಡುತ್ತಿದೆ ಹಾಗೂ ಇದಕ್ಕಾಗಿ ಸರ್ಕಾರ ಅನುದಾನವನ್ನು ನೀಡಿರುವುದು ಸ್ವಾಗತಾರ್ಹ ಎಂದರು.
ಕೃಷಿಕರ ಅಭಿವೃದ್ಧಿಯಲ್ಲಿ ಇ-ಸ್ಯಾಪ್ ತಂತ್ರಜ್ಞಾನ ಮಹತ್ವದ ಭೂಮಿಕೆಯನ್ನು ವಹಿಸುವಂತಾಗುತ್ತಿದೆ. ಈ ವಿವಿಯಿಂದ ಪದವಿಯನ್ನು ಪಡೆದ ವಿದ್ಯಾರ್ಥಿಗಳು ದೇಶದ ಕೃಷಿ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಮಹತ್ವದ ಕೊಡುಗೆಯನ್ನು ನೀಡುವುದಕ್ಕೆ ಮುಂದಾಗಬೇಕು ಎಂದರು.
ಕೃಷಿ ಶಿಕ್ಷಣ ಎನ್ನುವುದು ದೇಶವನ್ನು ಸಂಮೃದ್ಧಗೊಳಿಸುವುದಕ್ಕೆ ಸಹಕಾರಿ ಮತ್ತು ಆಧಾರವಾಗಲಿದೆ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಪ್ರಮುಖವಾಗಿರುತ್ತದೆ. ಉಳಿದೆಲ್ಲ ಕ್ಷೇತ್ರಗಳಿಗಿಂದ ಹೆಚ್ಚಿನ ಉದ್ಯೋಗವನ್ನು ಕೃಷಿ ಕ್ಷೇತ್ರ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.
ಪ್ರಸಕ್ತ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.ಅದೇ ರೀತಿ ಇಂದು ಪದಕಗಳನ್ನು ಪಡೆದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುವುದನ್ನು ಕಾಣಬಹುದು. ಇದು ಕೃಷಿ ಕ್ಷೇತ್ರ ಮತ್ತು ದೇಶದ ಹಿತದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ ಇವರೆಲ್ಲ ದೇಶದ ಸದೃಢತೆಗೆ ಮಹತ್ವದ ಕಾಣಿಯನ್ನು ನೀಡಲಿ ಎಂದರು.
ವಿಶ್ವ ಮಟ್ಟದಲ್ಲಿ ಭಾರತದ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ ಸಾಂಪ್ರದಾಯಿಕ ವ್ಯಾಪಾರದೊಂದಿಗೆ ಔಷಧಿ ಕ್ಷೇತ್ರದಲ್ಲಿನೂ ಬೆಳವಣಿಗೆಯನ್ನು ಸಾಧಿಸುವತ್ತ ಗಮನ ಹರಿಸಬೇಕಾಗಿದೆ. ಭಾರತೀಯ ಕೃಷಿ ಕ್ಷೇತ್ರದಲ್ಲಿನ ತರಕಾರಿ, ಹೂ ಮತ್ತು ಹಣ್ಣು ಬೆಳೆಯುವುದಕ್ಕೆ ಮಹಿಳೆಯ ಕೊಡುಗೆ ಅಪಾರವಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಆದಾಯ ಹೆಚ್ಚಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ ಅದರ ಪ್ರಯೋಜನಗಳನ್ನು ಪಡೆದುಕೊಂಡು ರೈತರು ಆರ್ಥಿಕವಾಗಿ ಸದೃಢರಾಗುವತ್ತ ಮುನ್ನಡೆಯಬೇಕು. ಕೃಷಿಕರ ಅಭಿವೃದ್ಧಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಬಿವೃದ್ಧಿಗೊಳಿಸುವಂತೆ ವಿಜ್ಞಾನಿಗಳಿಗೆ ಕರೆ ನೀಡಿದರು.
ಸ್ವಾತಂತ್ರ್ಯ ನಂತರದಲ್ಲಿ ದೇಶ ಅನೇಕ ಕ್ಷೇತ್ರಗಳಲ್ಲಿ ಅಬಿವೃದ್ಧಿಯನ್ನು ಹೊಂದುವುದರೊoದಿಗೆ ಆರ್ಥಿಕ ವ್ಯವಸ್ಥೆಯೂ ಬಲಿಷ್ಟವಾಗಿದೆ. ಇಂದು ವಿಶ್ವದಲ್ಲಿ ದೇಶದ ಆರ್ಥಿಕ ಸ್ಥಿತಿ ೫ನೇ ಸ್ಥಾನದಲ್ಲಿದೆ ಇದನ್ನು ೩ನೇ ಸ್ಥಾನಕ್ಕೆ ಬರುವ ಸಂಕಲ್ಪವನ್ನು ಹೊಂದಿದೆ ಇದು ಸಾಧ್ಯವಾಗುವುದಕ್ಕೆ ಕೃಷಿ ಕ್ಷೇತ್ರದಿಂದ ದೊಡ್ಡ ಕೊಡುಗೆ ನೀಡುವುದು ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನೆಲ, ಜಲ ಮತ್ತು ವಾಯು ರಕ್ಷಣೆಯತ್ತ ಎಲ್ಲರೂ ಆದ್ಯತೆಯನ್ನು ನೀಡುವುದು ಅವಶ್ಯಕವಾಗಿದೆ. ಹವಾಮಾನ ಬದಲಾವಣೆಗೆ ಪರಿಸರ ಹಾನಿಯೂ ಒಂದಾಗಿರುವುದರಿoದ ಪ್ರತಿಯೊಬ್ಬರೂ ಇದರ ರಕ್ಷಣೆಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದರು.
ವೇದಿಕೆಯಲ್ಲಿ ನವದೆಹಲಿಯ ಭಾ.ಕೃ.ಅ.ಪ ಉಪ ಮಹಾನಿರ್ದೆಶಕ ಡಾ. ಎಸ್.ಎನ್.ಝಾ ಮತ್ತು ಕೃಷಿ ವಿವಿಯ ಕುಲಪತಿ ಡಾ. ಎಂ.ಹನುಮoತಪ್ಪ ಇದ್ದರು.