ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣವು ಮೊಣಕಾಲು ಆಳದ ನೀರಿನಿಂದ ತುಂಬಿದೆ. ಪ್ರಯಾಣಿಕರು ಪ್ರವಾಹದ ನೀರಿನಲ್ಲಿ ಓಡಾಡುವ ವಿಡಿಯೋಗಳು ವೈರಲ್ ಆಗಿವೆ.
ಕಾಂಗ್ರೆಸ್ ನಾಯಕರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋಗಳನ್ನು ಹಂಚಿಕೊಂಡಿದ್ದು, ರನ್‌ವೇಗಳು ಮತ್ತು ಟರ್ಮಿನಲ್ ಪ್ರದೇಶಗಳು ಜಲಾವೃತವಾಗಿರುವುದು ಕಣ್ಣಿಗೆ ಗೋಚರಿಸಿತು. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಗುಜರಾತ್‌ನ ದಕ್ಷಿಣ ಸೌರಾಷ್ಟ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಶನಿವಾರ ಸಂಜೆ 4 ರಿಂದ 8 ಗಂಟೆಗಳ ಅವಧಿಯಲ್ಲಿ ಜುನಾಗಢದಲ್ಲಿ 219 ಮಿ.ಮೀ ಮಳೆ ಸುರಿದಿದ್ದು, ನಿಂತಿದ್ದ ಹತ್ತಾರು ಕಾರುಗಳು ಮತ್ತು ಜಾನುವಾರುಗಳು ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿವೆ.