ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್ ವಿಮಾನ ದುರಂತದಲ್ಲಿ ಪೈಲಟ್ಗಳು ಮತ್ತು ಸ್ವತಂತ್ರ ವಿಷಯ ತಜ್ಞರನ್ನು ತನಿಖಾ ತಂಡದಲ್ಲಿ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಹೇಳಿದೆ.
ಜೂನ್ 12 ರಂದು ಸಂಭವಿಸಿದ ಬೋಯಿಂಗ್ 787 ಡ್ರೀಮ್‌ಲೈನರ್ ಅಪಘಾತದಲ್ಲಿ ಪ್ರಯಾಣಿಕರು, ಸಿಬ್ಬಂದಿ ಮತ್ತು ಸ್ಥಳೀಯರು ಸೇರಿದಂತೆ 260 ಜನರು ಸಾವಿಗೀಡಾಗಿದ್ದಾರೆ.
ಈ ಕುರಿತು ನಡೆಯುತ್ತಿರುವ ತನಿಖೆಯ ಪಾರದರ್ಶಕತೆ ಮತ್ತು ಅದರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಮಾನಯಾನ ಪೈಲಟ್ಗಳ ಸಂಘ ಕೋರಿತ್ತು. ಇದನ್ನು ಎಎಐಬಿ ನಿರಾಕರಿಸಿದೆ.
ವಿಮಾನಯಾನ ಪೈಲಟ್ಗಳ ಸಂಘದ ಪ್ರತಿನಿಧಿಗಳು ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪ್ರಧಾನ ಕಚೇರಿಯಲ್ಲಿ ಎಎಐಬಿಯ ಮಹಾನಿರ್ದೇಶಕ ಜಿವಿಜಿ ಯುಗಂಧರ್ ಅವರನ್ನು ಭೇಟಿಯಾದರು. ವಿಮಾನ ದುರಂತದ ತನಿಖೆಯಲ್ಲಿ ವಿಷಯ ತಜ್ಞರು ಮತ್ತು ಅನುಭವಿ ಪೈಲಟ್‌ಗಳನ್ನು ಸೇರಿಸಿಕೊಳ್ಳಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, AAIB ನಿರ್ದೇಶಕರು ಚಾಲ್ತಿಯಲ್ಲಿರುವ ಕಾನೂನು ಇದಕ್ಕೆ ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರದ ಭಾಗವಲ್ಲದ ಹೊರಗಿನ ಸಂಸ್ಥೆಗಳನ್ನು ತನಿಖೆಯಲ್ಲಿ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ಎಎಐಬಿ ಕಾಯ್ದೆಯ ವಿರುದ್ಧ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ತನಿಖಾ ತಂಡದಲ್ಲಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ವಿಮಾನವು ಅಮೆರಿಕದ ಉತ್ಪಾದನೆಯಾದ್ದರಿಂದ ಅಂತಾರಾಷ್ಟ್ರೀಯ ಸುರಕ್ಷತಾ ಬಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB), ಇಂಗ್ಲೆಂಡ್ನ ವಾಯು ಅಪಘಾತ ತನಿಖಾ ದಳ (AAIB-UK) ಮತ್ತು ಬೋಯಿಂಗ್‌ನ ಪ್ರತಿನಿಧಿಗಳು ಸಲಹೆಗಾರರಾಗಿ ತಂಡದಲ್ಲಿದ್ದಾರೆ ಎಂದು ಎಎಐಬಿ ತಿಳಿಸಿದೆ.