ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ವಿರೋಧ ಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿ ಸತತ ಸಭೆ ನಡೆಸುತ್ತಿದೆ.
ಇದರ ನಡುವೆ ಇತ್ತ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಮಿತ್ರ ಪಕ್ಷ ಎಐಎಡಿಎಂಕೆ ಬಿಜೆಪಿ ಮೈತ್ರಿ ಮುರಿದುಕೊಂಡಿದೆ.
ಈ ಕುರಿತು ಇಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಘೋಷಿಸಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಮ್ಮ ಪಕ್ಷದ ಸಂಸ್ಥಾಪಕ ಅಣ್ಣಾದೊರೈ, ಮಾಜಿ ಸಿಎಂ ಜಯಲಲಿತಾ, ಸಾಹಿತಿ ಪೆರಿಯಾರ್ ಸೇರಿದಂತೆ ಹಲವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಣ್ಣಾಮಲೈ ಬಿಜೆಪಿ ಅಧ್ಯಕ್ಷರಾಗಲು ನಾಲಾಯಕ್ ಎಂದಿದ್ದಾರೆ.
ಜೊತೆಗೆ ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಮುಂಬರುವ ಚುನಾವಣೆ ವೇಳೆ ಚರ್ಚಿಸುತ್ತೇವೆ. ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಎಂದು ಜಯಕುಮಾರ್ ಹೇಳಿದ್ದಾರೆ.
ಕೇಂದ್ರ ಬಿಜೆಪಿಗೆ ಎಐಎಡಿಎಂಕೆ ಜೊತೆ ಮೈತ್ರಿಗೆ ಯಾವುದೇ ವಿರೋಧವಿಲ್ಲ. ಆದರೆ ಅಣ್ಣಾಮಲೈಗೆ ಮೈತ್ರಿ ಬೇಕಿಲ್ಲ. ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಡಿ ಜಯಕುಮಾರ್ ಹೇಳಿದ್ದಾರೆ.