ರಾಜ್ಯದಲ್ಲಿ ಐದು ಕೋಟಿ ಗಿಡ ನೆಡುವ ಗುರಿ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ,ಮೈಸೂರು:

ಅರಣ್ಯ ನೀತಿಯ ಪ್ರಕಾರ ರಾಜ್ಯದಲ್ಲಿ ಶೇ ೩೩ ರಷ್ಟು ಅರಣ್ಯ ಪ್ರದೇಶವಿರಬೇಕಾಗಿತ್ತು. ಆದರೆ ಶೇ ೧೯ ರಷ್ಟು ಇದೆ. ಇದು ಬಹಳ ಕಡಿಮೆಯಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಐದು ಕೋಟಿ ಗಿಡಗಳನ್ನು ನೆಡುವ ಮೂಲಕ ರಾಜ್ಯವನ್ನು ಹಸರೀಕರಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ರಾಜೀವ್ ಸ್ನೇಹ ಬಳಗ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಲಕ್ಷ-ವೃಕ್ಷ-೨೦೨೪ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಸ್ಯಗಳನ್ನು ನೆಡುವುದು,ಬೆಳೆಸೋದು ಬಹಳ ಒಳ್ಳೆಯ ಕೆಲಸ. ಪ್ರಕೃತಿ ನಮ್ಮಅವಶ್ಯಕತೆಗಳನ್ನ ಪೂರೈಸುತ್ತದೆ ಹೊರತು ನಮ್ಮ ದುರಾಸೆಗಳನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ನಮ್ಮ ದುರಾಸೆಗಳಿಂದ ಕಾಡು ನಶಿಸಿಹೋಗುತ್ತಿದೆ. ಕಾಡು ಕನಿಷ್ಠ ಪಕ್ಷ ೩೦% ಇರಬೇಕು. ನಮ್ಮಲ್ಲಿ ಈಗ ೧೯ ರಿಂದ ೨೦% ಇದೆ. ಸರಾಸರಿ ೩೩ರಷ್ಟು ಇರಬೇಕು. ಬೀದರ್, ಗುಲ್ಬರ್ಗ ಮುಂತಾದ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಶೇ ೫ ರಷ್ಟು ಮಾತ್ರ ಇದೆ. ಕೆಲವು ಜಿಲ್ಲೆಗಳಲ್ಲಿ ಬಹಳ ಕಡಿಮೆ ಕಾಡು ಇದೆ. ಆ ಜಿಲ್ಲೆಗಳಲ್ಲಿ ಅರಣ್ಯವನ್ನು ಹೆಚ್ಚಾಗಿ ಬೆಳೆಸಬೇಕಾಗಿದೆ. ಯಾವಾಗಲೂ ಗಾಳಿ, ನೀರು, ಭೂಮಿ,ಆಕಾಶ ಇವೆಲ್ಲ ಸ್ವಚ್ಛವಾಗಿದ್ರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಪ್ರಕೃತಿಯನ್ನ ಗೌರವಿಸಬೇಕು,ಸಂರಕ್ಷಣೆ ಮಾಡಬೇಕು. ನಾವೆಲ್ಲರೂ ಕೂಡ ಪ್ರಕೃತಿಯ ಒಂದು ಭಾಗ. ಪ್ರಕೃತಿ ನಮಗಾಗಿ ಇರದಲ್ಲ,ನಾವು ಪ್ರಕೃತಿಗೊಸ್ಕರ ಇರಬೇಕು. ಇದನ್ನ ಎಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈಗ ಜನ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ, ಜನಸಂಖ್ಯೆ ಬೆಳದಂತೆ ಕಾಡು ಕೂಡ ಬೆಳೆಯಬೇಕು. ಅದರಿಂದ ಪ್ರಕೃತಿಯಲ್ಲಿ ಸಮತೋಲನ ಇರಬೇಕು. ಆದರೆ ಈಗ ಪ್ರಕೃತಿಯಲ್ಲಿ ಅಸಮತೋಲವುಂಟಾಗಿದೆ. ಕಾಡು ಕಡಿಮೆಯಾಗುತ್ತಿದೆ. ಇದರಿಂದಾಗಿ ಈ ವರ್ಷ ಬಹಳ ಶಾಖ, ತಾಪಮಾನ ಏರಿಕೆ ಆಗಿತ್ತು. ದೆಹಲಿಯಲ್ಲಿ ೫೦ ಡಿಗ್ರಿಗೂ ಹೆಚ್ಚು ಏರಿಕೆಯಾಗಿತ್ತು. ಅದರಿಂದ ಅಲ್ಲಿ ಸಾವು, ನೋವುಗಳು ಆಗಿವೆ. ನಾನು ದೆಹಲಿಗೆ ಹೋಗಿದ್ದಾಗ ಎಸಿ ರೂಂ ಬಿಟ್ಟು ಹೊರ ಬರಲು ಆಗುತ್ತಿರಲಿಲ್ಲ. ಮಳೆ ಕಡಿಮೆಯಾಗಿದೆ,ಉಷ್ಣಾಂಶ ಹೆಚ್ಚಾಗಿದೆ. ಪ್ರಕೃತಿ ಅಸಮತೋಲನವಾಗಿದೆ.ಅದಕ್ಕಾಗಿ ತಾಪಮಾನದಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲೂ ಕೂಡ ೪೭ ಡಿಗ್ರಿ ವರೆಗೂ ಏರಿಕೆ ಆಗಿತ್ತು ಎಂದರು.

ರಾಜ್ಯದಲ್ಲಿ ಐದು ವರ್ಷದಲ್ಲಿ ೫ ಕೋಟಿ ಗಿಡ ಬೆಳೆಸುವ ಗುರಿ ಇಟ್ಟುಕೊಂಡಿದ್ದೇವೆ. ಇಡೀ ರಾಜ್ಯದಲ್ಲಿ ಹಸಿರು ಬೆಳೆಸಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಫಾರೆಸ್ಟ್ ಹೆಚ್ಚು ಹೆಚ್ಚು ಅಭಿವೃದ್ಧಿ ಮಾಡಲು ಸಚಿವ ಈಶ್ವರ್ ಖಂಡ್ರೆಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.ಜೊತೆಗೆ ಸಾರ್ವಜನಿಕರು ಕೂಡ ಸರ್ಕಾರದ ಜೊತೆ ಕೈ ಜೋಡಿಸಬೇಕು. ನಮ್ಮ ಪೂರ್ವಿಕರು ಒಂದು ಮರ ಕಡಿದ್ರೆ ಇನ್ನೊಂದು ಮರ ನೆಡುತ್ತಿದ್ದರು. ಆ ಪದ್ದತಿ ಈಗ ಮತ್ತೆ ಬರಬೇಕು. ಪ್ರತಿಯೊಬ್ಬರು ಕನಿಷ್ಠ ಎರಡು ಗಿಡಗಳನ್ನಾದರೂ ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.

ಇದೇ ವೇಳೆ ಪರಸರ ಸಂರಕ್ಷಣಾ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಬೆಂಗಳೂರಿನ ಶ್ರೀನಿವಾಸ್ ರಾಜು ಮತ್ತು ಬೆಳಗಿರಿರಂಗನಬೆಟ್ಟದ ಪರಿಸರ ಪ್ರೇಮಿ ರಾಮೇಗೌಡ ಎಂಬುವರಿಗೆ ಸಿರಿ ಸಂವರ್ಧನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಸ್ಯ ಸಂಭ್ರಮ ಕಿರು ಹೊತ್ತಿಗೆಯನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿದರು. ಸಸಿ ವಿತರಣೆ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅತಿಥಿಗಳಾಗಿ ಮೈಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯಾ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು. ಸಾನಿಧ್ಯವನ್ನು ಸುತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ, ಕುಂದೂರು ಮಠದ ಡಾ.ಶ್ರೀಶರತ್ ಚಂದ್ರಸ್ವಾಮಿ, ಅಧ್ಯಕ್ಷತೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!