ಹೊಸದಿಗಂತ ವರದಿ,ಯಲ್ಲಾಪುರ:
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಸಹಯೋಗದಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜೂನ್ ೧೮ ರಂದು ಪ್ರಧಾನ ಮಂತ್ರಿಯವರ ಜೊತೆಗೆ ನೈಸರ್ಗಿಕ ಕೃಷಿ ವಿಷಯದ ಕುರಿತು ಸಂವಾದ ನಡೆಸಲು ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ್ ಹೆಗಡೆ ಅವರು ಆಯ್ಕೆಯಾಗಿದ್ದಾರೆ.
ನೈಸರ್ಗಿಕ ಕೃಷಿ ತರಬೇತಿ ಪಡೆದ ಕೃಷಿ ಸಖಿಯರಿಗೆ ಈ ಅವಕಾಶ ಕಲ್ಪಿಸಲಾಗಿದ್ದು ಕರ್ನಾಟಕ ರಾಜ್ಯದಿಂದ ಇಬ್ಬರು ಕೃಷಿ ಸಖಿಯರನ್ನು ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.
ಲತಾ ರಾಜೀವ್ ಹೆಗಡೆಯವರು ತಮ್ಮ ಪತಿಯೊಂದಿಗೆ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದು ತಾಲೂಕಿನ ಉಪ್ಪಳೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೃಷಿ ಸಖಿಯಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಸಂವಾದ ನಡೆಸಲು ರಾಜ್ಯದ ಪ್ರತಿನಿಧಿಯಾಗಿ ಅವಕಾಶ ದೊರಕಿರುವ ಕುರಿತ ಲತಾ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.
ಹಿರಿಯರಾದ ಗಣಪತಿ ಹೆಗಡೆ ಜಂಬೇಸಾಲ, ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಹರ್ಷ ವ್ಯಕ್ತ ಪಡಿಸಿದ್ದಾರೆ.