ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅ.18ರವರೆಗೆ ಟೆಲ್ ಅವೀವ್ ಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಇಸ್ರೇಲ್ ಹಾಗೂ ಹಮಾಸ್ ಉಗ್ರ ಸಂಘಟನೆಯ ನಡುವಿನ ಸಂಘರ್ಷದ ಹಿನ್ನೆಲೆ ಇಸ್ರೇಲ್ ಯುದ್ಧಗ್ರಸ್ತವಾಗಿರುವ ಕಾರಣ ಏರ್ ಇಂಡಿಯಾವು ವಿಮಾನಗಳ ಸ್ಥಗಿತಗೊಳಿಸಿದೆ.
ವಾರದಲ್ಲಿ ನಿಗದಿಯಾಗಿರುವ ಏರ್ ಇಂಡಿಯಾ 5 ವಿಮಾನಗಳು ಭಾರತದಿಂದ ಟೆಲ್ ಅವೀವ್ ಗೆ ಸಂಚರಿಸುತ್ತಿತ್ತು. ಕಳೆದ ವಾರ ದಾಳಿ ಆರಂಭವಾದ ಬೆನ್ನಲ್ಲೆ ಅ.14 ವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಟೆಲ್ ಅವೀವ್ ಗೆ ಮತ್ತು ಅಲ್ಲಿಂದ ಬರುವ ನಿಗದಿತ ವಿಮಾನಗಳನ್ನು ಅ.18 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಏರ್ ಲೈನ್ ಅಧಿಕಾರಿ ಶನಿವಾರ ಹೇಳಿದ್ದಾರೆ.
ಅವಶ್ಯಕತೆಗಳಿಗೆ ಅನುಗುಣವಾಗಿ ಭಾರತೀಯರನ್ನು ಮರಳಿ ಕರೆತರಲು ವಿಮಾನ ಸಂಸ್ಥೆ ಚಾರ್ಟರ್ಡ್ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಸ್ರೇಲ್‌ನಿಂದ ಹಿಂತಿರುಗಲು ಬಯಸುವ ಭಾರತೀಯರನ್ನು ಕರೆತರಲು ಸರ್ಕಾರವು ಪ್ರಾರಂಭಿಸಿದ ಆಪರೇಷನ್ ಅಜಯ್ ಅಡಿಯಲ್ಲಿ, ಏರ್‌ಲೈನ್ ಇಲ್ಲಿಯವರೆಗೆ ಎರಡು ವಿಮಾನಗಳನ್ನು ನಿರ್ವಹಿಸಿದೆ.