ತಿಮ್ಮಯ್ಯ ಸ್ಮಾರಕ ಭವನಕ್ಕೆ ಏರ್ ಮಾರ್ಷಲ್ ಮನವೇಂದ್ರಸಿಂಗ್ ಭೇಟಿ

ಹೊಸದಿಗಂತ ವರದಿ, ಮಡಿಕೇರಿ:
ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಅವರು ನಗರದಲ್ಲಿನ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ಸ್ಮಾರಕ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನರಲ್ ತಿಮ್ಮಯ್ಯ ಭಾರತೀಯರ ಸ್ಪೂರ್ತಿಯ ಚೇತನ ಎಂದು ಅವರು ಶ್ಲಾಘಿಸಿದರು.
ಏರ್ ಮಾರ್ಷಲ್ ಮನವೇಂದ್ರ ಸಿಂಗ್ ವರು ತಮ್ಮ ಪತ್ನಿಯೊಂದಿಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ದೇಶದ ವೀರಸೇನಾನಿಗೆ ಗೌರವ ನಮನ ಸಲ್ಲಿಸಿದರು.
ತಿಮ್ಮಯ್ಯ ಬಾಲ್ಯ, ಸೇನಾ ವೃತ್ತಿ ಸಂಬಂಧಿತ ಸ್ಮಾರಕ ಭವನದಲ್ಲಿನ ಚಿತ್ರ, ವಿಡಿಯೋಗಳನ್ನು ವೀಕ್ಷಿಸಿದ ಏರ್ ಮಾರ್ಷಲ್ ಮನವೇಂದ್ರ ಸಿಂಗ್, ದೇಶದ ಸೇನಾ ಪಡೆಗೆ ಜನರಲ್ ತಿಮ್ಮಯ್ಯ ಅವರ ಕೊಡುಗೆ ಅಪ್ರತಿಮವಾದದ್ದು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ವೀರಸೇನಾನಿಯ ಸೇನಾ ಜೀವನದ ಐತಿಹಾಸಿಕ ಕ್ಷಣಗಳನ್ನು ಈ ಸ್ಮಾರಕ ಭವನದಲ್ಲಿ ಉತ್ತಮವಾಗಿ ನಿರ್ವಹಿಸಲಾಗಿದೆ. ಭವಿಷ್ಯದ ಪೀಳಿಗೆಗೆ ಈ ಸ್ಮಾರಕ ಭವನ ಅತ್ಯುತ್ತಮ ಸ್ಪೂರ್ತಿಯ ತಾಣವಾಗಿದೆ ಎಂದು ಹೇಳಿದ ಮನವೇಂದ್ರಸಿಂಗ್, ಭಾರತದ ಸೇನೆಯ ಸ್ಪೂರ್ತಿಯ ಚೇತನ ಜನರಲ್ ತಿಮ್ಮಯ್ಯ ಅವರಿಗೆ ಗೌರವ ನಮನ ಸಲ್ಲಿಸಿರುವುದು ಹೆಮ್ಮೆ ತಂದಿದೆ ಎಂದು ಮೆಚ್ಚುಗೆಯಿಂದ ನುಡಿದರು.
ಮನವೇಂದ್ರ ಸಿಂಗ್ ಅವರಿಗೆ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ತಿಮ್ಮಯ್ಯ ಅವರ ಬಗ್ಗೆ ಮಾಹಿತಿ ನೀಡಿದರು.
ಕೂಡಿಗೆ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‍ಪ್ರೀತ್ ಸಿಂಗ್ ಜತೆಗಿದ್ದರು.
ಇದಕ್ಕೂ ಮೊದಲು ಏರ್ ಮಾರ್ಷಲ್ ಮನವೇಂದ್ರಸಿಂಗ್, ತಲಕಾವೇರಿ ಮತ್ತು ಭಾಗಮಂಡಲ ಭಗಂಡೇಶ್ವರ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!