ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರುತ್ತಿದ್ದು, ಹೀಗಾಗಿ ಈ ತಿಂಗಳು ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಅವರು ಬುಧವಾರ ಹೇಳಿದ್ದಾರೆ.
ಈ ಸಂಬಂಧ ಸಚಿವ ರೈ ಅವರು ಐಐಟಿ ಕಾನ್ಪುರ ವಿಜ್ಞಾನಿಗಳೊಂದಿಗೆ ಸಭೆ ನಡೆಸಿದ್ದು, ವಾತಾವರಣದಲ್ಲಿ ಮೋಡಗಳು ಅಥವಾ ತೇವಾಂಶವಿದ್ದರೆ ಮಾತ್ರ ಮೋಡ ಬಿತ್ತನೆ ಮಾಡಲು ಯತ್ನಿಸಬಹುದು ಎಂದಿದ್ದಾರೆ.
ನವೆಂಬರ್ 20-21ರ ಸುಮಾರಿಗೆ ಮೋಡ ಬಿತ್ತನೆಗೆ ಸೂಕ್ತ ವಾತಾವರಣ ಸೃಷ್ಟಿಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸಲು ನಾವು ವಿಜ್ಞಾನಿಗಳಿಗೆ ಕೇಳಿಕೊಂಡಿದ್ದೇವೆ. ಅದನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೃತಕ ಮಳೆಯ ಕುರಿತು ಜಾಗತಿಕ ಮಟ್ಟದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು ತಿಳಿಸಿದ್ದಾರೆ. ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಜಾಗತಿಕವಾಗಿ, ಕೃತಕ ಮಳೆಯ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಇದಕ್ಕೆ ಮೋಡಗಳು ಅಥವಾ ತೇವಾಂಶದ ವಾತಾವರಣ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.