ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಕುರಿತು ವಿಧಾನಸಭೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ನೀಡಿದ್ದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ನಿತೀಶ್ ಕುಮಾರ್ ವಿರುದ್ಧ ಮುಜಾಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಸದನದಲ್ಲಿ ನಿತೀಶ್ ನೀಡಿರುವ ಹೇಳಿಕೆ ವಿರುದ್ಧ ವಕೀಲ ಅನಿಲ್ ಕುಮಾರ್ ಸಿಂಗ್ ಈ ದೂರು ದಾಖಲಿಸಿದ್ದಾರೆ. ಅನಿಲ್ ಕುಮಾರ್ ಸಿಂಗ್ ಅವರು 354ಡಿ, 504, 505,509 ಐಪಿಸಿ ಮತ್ತು 67 ಐಟಿ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ. ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಲಾಲ್ ಅವರು ನವೆಂಬರ್ 25 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದೇನು?
ಮಂಗಳವಾರ ನಿತೀಶ್ ಕುಮಾರ್ ಅವರು ಸದನದಲ್ಲಿ ಜಾತಿ ಗಣತಿ ಕುರಿತು ತಮ್ಮ ನಿಲುವನ್ನು ಮಂಡಿಸುತ್ತಿದ್ದರು. ಈ ಸಂದರ್ಭದಲ್ಲಿ ಬಿಹಾರದ ಜನಸಂಖ್ಯೆ ಹೇಗೆ ನಿಯಂತ್ರಿಸಲಾಗಿದೆ ಎಂಬುದನ್ನು ಅವರು ಹೇಳಿದರು. ರಾಜ್ಯದಲ್ಲಿ ಸಂತಾನೋತ್ಪತ್ತಿ ಪ್ರಮಾಣ ಶೇ 4.2 ರಿಂದ 2.9ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡುವ ಸಂದರ್ಭದಲ್ಲಿ ಜನಸಂಖ್ಯಾ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ ಎಂದಿದ್ದರು.