Monday, November 24, 2025

ದೆಹಲಿಯಲ್ಲಿ ‘ವಾಯು’ ಸಂಕಷ್ಟ: ಇಂಡಿಯಾ ಗೇಟ್ ಬಳಿ ಭುಗಿಲೆದ್ದ ಜನರ ಆಕ್ರೋಶ, ಪೊಲೀಸರಿಗೆ ಪೆಪ್ಪರ್ ಸ್ಪ್ರೇ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ವಾಯುಗುಣಮಟ್ಟ ಜನರನ್ನು ಬೀದಿಗಿಳಿಸಿದೆ. ಉಸಿರಾಡಲು ಕಷ್ಟವಾಗುವ ಮಟ್ಟಕ್ಕೆ ಮಾಲಿನ್ಯ ಏರಿಳಿತ ಕಂಡಿರುವ ಹಿನ್ನೆಲೆಯಲ್ಲಿ ಆಕ್ರೋಶಿತ ನಾಗರಿಕರು ಇಂಡಿಯಾ ಗೇಟ್ ಎದುರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ತೀವ್ರಗೊಂಡಂತೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ–ನೂಕಾಟ ಉಂಟಾಗಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ ವಾಗ್ವಾದ ಉಂಟಾಗಿ, ಕೆಲವರು ಪೊಲೀಸರ ಮೇಲೆಯೇ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ನಡೆದಿದೆ. ಇದರಲ್ಲಿ ನಾಲ್ಕು ಪೊಲೀಸರು ಗಾಯಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಂತರ್ ಮಂತರ್‌ ಬದಲು ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತು. ಬ್ಯಾರಿಕೇಡ್ ಕಿತ್ತು ಎಸೆಯುವ ಯತ್ನ ಮಾಡಿದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಸಮಯದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇತ್ತೀಚಿನ ಅಂಕಿಅಂಶಗಳು ದೆಹಲಿಯ ವಾಯು ಗುಣಮಟ್ಟ ‘ಅತ್ಯಂತ ಕಳಪೆ’ ವಿಭಾಗಕ್ಕೆ ಕುಸಿದಿರುವುದನ್ನು ತೋರಿಸುತ್ತಿವೆ. ಭಾನುವಾರ ದಾಖಲಾದ AQI 391ಕ್ಕೆ ಏರಿಕೆ ಕಾಣಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವಾಯು ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ಕ್ರಮಗಳನ್ನ ಕೈಗೊಂಡಿದ್ದರೂ, ಜನರಲ್ಲಿ ಆಕ್ರೋಶ ಮತ್ತು ಆತಂಕ ಮುಂದುವರೆದಿರುವುದು ಸ್ಪಷ್ಟವಾಗಿದೆ.

error: Content is protected !!