ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು 25ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ. ಎರಡನೇ ದಿನ ಕೂಡ ವ್ಯವಹಾರ ಸಮ್ಮೇಳನ ನಡೆಯಲಿದೆ. ಇಂದು ಕೂಡ ಭಾರತೀಯ ಸ್ಟಾರ್ಟ್ ಆಪ್ ಕಂಪನಿಗಳು ವಿದೇಶಿ ಪ್ರಮುಖರನ್ನ ಆಕರ್ಷಿಸಲಿವೆ.
ತುಮಕೂರಿನ ಹೆಎಎಲ್ ಏಷ್ಯಾದ ಅತಿ ದೊಡ್ಡ ವಿಮಾನ ತಯಾರಿಕಾ ಕಾರ್ಖಾನೆಯತ್ತ ವಿದೇಶಿ ರಕ್ಷಣಾ ಅಧಿಕಾರಿಗಳ ಚಿತ್ತ ನೆಟ್ಟಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಉತ್ಪನ್ನಗಳ ಬಗ್ಗೆ ಜಗತ್ತಿನ ಮಾರುಕಟ್ಟೆಗೆ ಭಾರತೀಯ ಕಂಪನಿಗಳು ಪರಿಚಯಿಸಲಿವೆ. ಎರಡನೇ ದಿನದ ಏರ್ ಶೋನಲ್ಲಿ ಸ್ವೀಡನ್ ದೇಶದ ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಸಾಬ್ ಕಂಪನಿಯಿಂದ ನಿರ್ಮಿತವಾದ ಈ ಫೈಟರ್ ಏರ್ ಕ್ರಾಫ್ಟನ್ನು ಭಾರತಕ್ಕೆ ಪರಿಚಯಿಸುವ ಕುರಿತು ಉಭಯ ರಾಷ್ಟ್ರಗಳ ಜೊತೆ ಮಾತುಕತೆ ಕೂಡ ನಡೆಯುತ್ತಿದೆ.
ಆಧುನಿಕ ಯುದ್ಧಗಳ ಸಂಧರ್ಭದಲ್ಲಿ ಫೈಟರ್ ಜೆಟ್‌ಗಳಷ್ಟೇ ಪ್ರಾಮುಖ್ಯತೆ ಕಾರ್ಗೋ ವಿಮಾನಗಳಿಗೂ ಇದೆ. ಫೈಟರ್ ಜೆಟ್‌ಗಳು ಶತ್ರುವಿನ ಮೇಲೆ ಮುಗಿಬೀಳುವ ಸಾಮಾರ್ಥ್ಯ ಹೊಂದಿವೆ. ಕಾರ್ಗೋ ವಿಮಾನಗಳು ಫೈಟರ್ ಜೆಟ್‌ಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಅದೇ ರೀತಿ ಈ ಬಾರಿ ಏರ್ ಶೋನಲ್ಲಿ ಸಿ-390 ಮಿಲಿನಿಯಂ ಹೆಸರಿನ ಭಾರೀ ಗಾತ್ರದ ಬ್ರೆಜಿಲ್ ಮೂಲದ ಕಾರ್ಗೋ ವಿಮಾನ ತನ್ನತ್ತ ಸೆಳೆಯುತ್ತಿದೆ. ವಾಯುಸೇನೆಯಲ್ಲಿ 6 ರೀತಿಯ ಕಾರ್ಯವನ್ನ ಮಾಡಿ, ತನ್ನ ಸೇನೆಗೆ ಬಲ ತುಂಬುವ ಈ ಕಾರ್ಗೋ ಸದ್ಯ ಬ್ರೆಜಿಲ್, ಪೋರ್ಚುಗಲ್, ಹಂಗೇರಿ ದೇಶಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಸೇನೆಗೆ ಈ ಬಾಹುಬಲಿಯನ್ನ ಸೇರ್ಪಡೆ ಮಾಡಲು ಅನೇಕ ದೇಶಗಳು ಕೂಡ ಸಾಲಿನಲ್ಲಿ ಕಾದು ನಿಂತಿವೆ.