ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ ಸೋಮವಾರ ಶುರುವಾಗಲಿದೆ.
ಯಲಹಂಕ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ.
ಈ ಬಾರಿ ʻರನ್ ವೇ ಟು ಬಿಲಿಯನ್ ಆಪರ್ಚುನಿಟಿ ಟ್ಯಾಗ್ ಲೈನ್ʼನಲ್ಲಿ ಏರ್ ಶೋ ಜರುಗಲಿದೆ. 100ಕ್ಕೂ ಹೆಚ್ಚು ದೇಶಗಳ, 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗುತ್ತಿದ್ದು, ಎಐ, ಡ್ರೋನ್, ಗ್ಲೋಬಲ್ ಏರೋ ಸ್ಪೇಸ್, ಸೇರಿದಂತೆ ನೂತನ ತಂತ್ರಜ್ಞಾನದ ವಿವಿಧ ವಸ್ತುಪ್ರದರ್ಶನಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಇರಲಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ.
ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ.
ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.