Wednesday, December 7, 2022

Latest Posts

ತನ್ನ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿದ್ದರು ಮುನ್ಶಾ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮುನ್ಶಾ ಸಿಂಗ್ ‘ದುಖಿ’ (1890-1971) ಗದರ್ ಚಳವಳಿಯ ಪ್ರಮುಖ ಹೋರಾಟಗಾರ ಹಾಗೂ ಪ್ರಸಿದ್ಧ ಕ್ರಾಂತಿಕಾರಿ ಕವಿ. ಅವರ ಕ್ರಾಂತಿಕಾರಿ ಕವಿತೆಗಳು ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದವು. ಬ್ರಿಟೀಷ್‌ ಆಡಳಿತವನ್ನು ಉಗ್ರವಾಗಿ ವಿರೋಧಿಸಿ ಅವರು ರಚಿಸಿದ್ದ ಕ್ರಾಂತಿಗೀತೆಗಳು ಮತ್ತು ಬರಹಗಳನ್ನೇ ಆಧಾರವಾಗಿರಿಸಿಕೊಂಡು ಲಾಹೋರ್ ಪಿತೂರಿ ಪ್ರಕರಣದಲ್ಲಿ ಮುನ್ಶಾ ಸಿಂಗ್ ಗೆ ಶಿಕ್ಷೆ ವಿಧಿಸಲಾಗಿತ್ತು.
ಮುನ್ಶಾ ಸಿಂಗ್ 1890 ರ ಜುಲೈ 1 ರಂದು ಪಂಜಾಬ್‌ನ ಜಲಂಧರ್ ಜಿಲ್ಲೆಯ ಜಂಡಿಯಾಲಾ ಮಂಜ್ಕಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಯಾಗಿದ್ದರು. 1908 ರಲ್ಲಿ ಉದ್ಯೋಗವನ್ನರಸಿ ಅಮೆರಿಕಾದ ಹೊನಲುಲುಗೆ ತೆರಳಿದ ಮುನ್ಶಾ ಸಿಂಗ್, ಬಳಿಕ 1912 ರಲ್ಲಿ ಕೆನಡಾದ ವ್ಯಾಂಕೋವರ್ ನಲ್ಲಿ ನೆಲೆನಿಂತರು. ಅಲ್ಲಿ ಗದರ್ ಪಕ್ಷ ಸ್ಥಾಪನೆಯಾದಾಗ ಅದರ ಸಕ್ರಿಯ ಸದಸ್ಯರಾದರು ಮತ್ತು ‘ದುಖಿ’ ಎಂಬ ಕಾವ್ಯನಾಮದಲ್ಲಿ ಕ್ರಾಂತಿಕಾರಿ ಕಾವ್ಯಗಳನ್ನು ಬರೆದು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರಿಗೆ ಪ್ರೇರಣೆ ನೀಡಿದರು.
ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ಭಾರತದಲ್ಲಿ ಸಶಸ್ತ್ರ ದಂಗೆ ನಡೆಸುವ ಉದ್ದೇಶದಿಂದ ಇತರೆ ದೇಶವಾಸಿಗಳೊಂದಿಗೆ 1915 ಭಾರತಕ್ಕೆ ಹಿಂದಿರುಗಿದರು. ಆದರೆ ಕುತಂತ್ರಿ ಬ್ರಿಟೀಷ್‌ ಅಧಿಕಾರಿಗಳು ಅವರು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಬಂಧಿಸಿದರು. ಯಾವುದೇ ವಿಚಾರಣೆ ನಡೆಸದೆ ಅವರನ್ನು 22 ತಿಂಗಳುಗಳ ಕಾಲ ಕತ್ತಲೆ ಕೋಣೆಯಲ್ಲಿ ಬಂಧಿಸಿಡಲಾಗಿತ್ತು. ಬಳಿಕ ಬಿಡುಗಡೆಯಾದ ಮುನ್ಶಿ ಎರಡನೇ ಲಾಹೋರ್ ಪಿತೂರಿ ಪ್ರಕರಣದಲ್ಲಿ ಬ್ರಿಟೀಷ್ ಆಡಳಿತದ ವಿರುದ್ಧ‌ ದಂಗೆ ನಡೆಸಿದ್ದಕ್ಕೆ ಮತ್ತೆ ಬಂಧನಕ್ಕೊಳಗಾದರು. ವಿಕ್ಟೋರಿಯಾ, ವ್ಯಾಂಕೋವರ್, ಸಂಗೋವಾಲ್ ಮತ್ತು ಲಾಹೋರ್‌ ನಲ್ಲಿ ಬ್ರಿಟೀಷ್‌ ಆಡಳಿತದ ವಿರುದ್ಧ ಸಂಘರ್ಷ ನಡೆಸಿದ ಆರೋಪದಡಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
1922 ರಲ್ಲಿ ಬಿಡುಗಡೆಯಾದ ನಂತರ, ಅವರು ಕವಿ ಕುಟಿಯ (ಕವಿಯ ಗುಡಿಸಲು) ಎಂಬ ಸಾಹಿತ್ಯ ಸಂಘವನ್ನು ಸ್ಥಾಪಿಸಿದರು. 1929 ರಲ್ಲಿ ಸಮಾಜವಾದಿ ಚಿಂತನೆಗಳಿದ್ದ ಪತ್ರಿಕೆ ಸಂಜಿವಾಲ್ ಅನ್ನು ಸ್ಥಾಪಿಸಿದರು. ಮುನ್ಶಿ ಅವರು ದೇಶಭಕ್ತಿ ಮತ್ತು ಸಿಖ್ ತತ್ವಶಾಸ್ತ್ರದ ಬಗೆಗಿನ ವಿಚಾರಧಾರೆಗಳಿರುವ 15 ಕವನ ಸಂಕಲನಗಳನ್ನು ಬರೆದಿದ್ದಾರೆ. ಅವರು ಸ್ವಾತಂತ್ರ್ಯದ ನಂತರವೂ ತಮ್ಮ ಸಾಹಿತ್ಯಿಕ ಚಟುವಟಿಕೆಗಳನ್ನು ಮುಂದುವರೆಸಿದರು. 1950 ರಲ್ಲಿ ಬಾಂಬೆಯಿಂದ ಪ್ರಕಟವಾಗುತ್ತಿದ್ದ ಪಂಜಾಬಿ ಭಾಷೆಯ ಮಾಸಿಕ ನಿಯತಕಾಲಿಕ ʼಜೀವನ್ʼ ಅನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಹೋರಾಟ ಕುರಿತಾದ ವಿಚಾರಗಳಿದ್ದ ʼದೇಶ್ ಭಗತ್ ಯಾದನ್ʼ ಕೃತಿಯನ್ನು ಸಂಪಾದಿಸಿದರು. 1971 ರ ಜನವರಿ 26 ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!