ಶಿವಮೊಗ್ಗದಲ್ಲಿ ಆನ್ ಲೈನ್ ನಾಮಪತ್ರ ಸಲ್ಲಿಸಿರುವ ಏಕೈಕ ಅಭ್ಯರ್ಥಿ ಅಜಯ್ ಕುಮಾರ್ ಶರ್ಮಾ

ಹೊಸದಿಗಂತ ವರದಿ ಶಿವಮೊಗ್ಗ:

ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಏಕೈಕ ಅಭ್ಯರ್ಥಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಭಾಜಾ ಭಜಂತ್ರಿ, ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದರೆ, ಇವರು ಆನ್ ಲೈನ್ ಪ್ರಯೋಗ ಮಾಡಿದ್ದಾರೆ.

ಇತಿಹಾಸ ಸಂಶೋಧಕ ಹಾಗೂ ಪರಿಸರ ಪ್ರೇಮಿಯೂ ಆಗಿರುವ ಅಜಯ್ ಕುಮಾರ್ ಶರ್ಮಾ ಆನ್ ಲೈನ್ ನಲ್ಲಿ ನಾಮಪತ್ರ ಸಲ್ಲಿಸಿರುವ ಏಕೈಕ ಅಭ್ಯರ್ಥಿ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಇವರು ನಾಮಪತ್ರ ಸಲ್ಲಿಸಿದ್ದಾರೆ.

ಮೊದಲ ಬಾರಿ ಅವಕಾಶ…
ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿಯೂ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಬಹಳ ಸರಳವಾಗಿ, ಖರ್ಚಿಲ್ಲದೇ, ಕೂತಲ್ಲಿಯೇ ನಾಮಪತ್ರ ಸಲ್ಲಿಸಬಹುದು ಎನ್ನುತ್ತಾರೆ ಅಜಯ್ ಕುಮಾರ್ ಶರ್ಮಾ.
ಇದರಲ್ಲಿ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ನಾಮಪತ್ರ ಭರ್ತಿ ಮಾಡಬಹುದು. ಮುಂದೆ ಕನ್ನಡದಲ್ಲಿಯೂ ಭರ್ತಿ ಮಾಡಲು ಅವಕಾಶ ನೀಡಬೇಕು ಎಂದರು.

ಅರ್ಧ ಗಂಟೆ ಸಾಕು…
ಆನ್ ಲೈನ್ ನಾಮಪತ್ರ ತುಂಬಲು ಕೇವಲ ಅರ್ಧ ಗಂಟೆ ಸಾಕು. ಚುನಾವಣಾ ಆಯೋಗ ಬಹಳ ಸರಳವಾಗಿ ಇದನ್ನು ಮಾಡಿದೆ. ಬಳಕೆದಾರ ಸ್ನೇಹಿ ಆಗಿದೆ. ಅಭ್ಯರ್ಥಿ ಸ್ಥಳದಲ್ಲಿ ಇದ್ದು ಮಾಹಿತಿ ನೀಡಿದರೆ ಅರ್ಧ ಗಂಟೆಯ ಒಳಗೆ ಪ್ರಕ್ರಿಯೆ ಮುಗಿಯುತ್ತದೆ. ಪ್ರತಿ ಪೇಜ್ ಗೂ ಇಲ್ಲಿ ಕ್ಯೂ ಆರ್ ಕೋಡ್ ಬರುವಂತೆ ಮಾಡಿದ್ದಾರೆ. ಅದನ್ನು ಪ್ರಿಂಟ್ ತೆಗೆದು ಸ್ಕ್ಯಾನ್ ಮಾಡಿದರೆ ಅಭ್ಯರ್ಥಿ ಪೂರ್ಣ ವಿವರ ಬರುತ್ತದೆ. ಸೂಚಕರ ಮತದಾರರ ಗುರುತಿನ ಚೀಟಿ ಸಂಖ್ಯೆ ನೀಡಿದರೆ ಸಾಕು, ಉಳಿದ ವಿವರಗಳು ಅಲ್ಲಿಯೇ ತೆರೆದುಕೊಳ್ಳುತ್ತವೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೊಸದಿಗಂತಕ್ಕೆ ತಿಳಿಸಿದರು.

ಬಿಜೆಪಿ ಬಳಸಬಹುದಿತ್ತು…
ಡಿಜಿಟಲ್ ಇಂಡಿಯಾ ಪ್ರಧಾನಿ ಮೋದಿ ಅವರ ಕನಸು. ನಾಮಪತ್ರ ಸಲ್ಲಿಕೆ ಆನ್ ಲೈನ್ ಮಾಡಿರುವುದು ಅದರ ಒಂದು ಭಾಗ. ಅದನ್ನು ಬಿಜೆಪಿ ಹೆಚ್ಚು ಬಳಕೆ ಮಾಡಬಹುದಿತ್ತು. ಮುಂದಿನ ದಿನಗಳಲ್ಲಿ ಇದನ್ನು ಎಲ್ಲರೂ ಬಳಕೆ ಮಾಡಿದರೆ ಸಮಯ, ಹಣ ಎರಡೂ ಉಳಿತಾಯ ಆಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!