ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ಪ್ರಸಿದ್ಧ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ 814ನೇ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ ಈ ಸಲವೂ ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಅರ್ಪಿಸಿದ್ದಾರೆ. ಪ್ರಧಾನಿಯ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಚಾದರ್ ಅನ್ನು ದರ್ಗಾಕ್ಕೆ ನೀಡಿದರು.
ಶಾಂತಿಯ ಸಂಕೇತವಾದ ಪವಿತ್ರ ಚಾದರ್ (ಶಾಲು) ಅನ್ನು ದರ್ಗಾಕ್ಕೆ ನೀಡಿದ ಬಳಿಕ, ಪ್ರಧಾನಿ ಮೋದಿ ಅವರು ಕಳುಹಿಸಿದ್ದ ಸಂದೇಶವನ್ನು ಕೇಂದ್ರ ಸಚಿವರು ಎಲ್ಲರೆದುರು ಓದಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಿಜಿಜು, “ನಾನು ಇಲ್ಲಿಗೆ ಬಂದಾಗಲೆಲ್ಲ ಶಾಂತಿ ಸಿಗುತ್ತದೆ. ಕೇಂದ್ರ ಸರ್ಕಾರದ ಪರವಾಗಿ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿದ್ದೇನೆ” ಎಂದರು.
ಉರುಸ್ ಸಮಯದಲ್ಲಿ ದರ್ಗಾಕ್ಕೆ ಭೇಟಿ ನೀಡುವುದು ಒಂದು ವಿಶೇಷ ಸಂದರ್ಭ. ಬೇರೆ ದಿನಗಳಲ್ಲೂ ಬಂದಾಗಲೆಲ್ಲ ಶಾಂತಿಯ ಭಾವ ಸಿಗುತ್ತದೆ. ಆದರೆ, ಉರುಸ್ ಸಮಯದಲ್ಲಿ ಆಗಮಿಸುವುದು ಮಹತ್ವದ್ದು. ಇದೇ ವೇಳೆ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ದರ್ಗಾಕ್ಕೆ ಚಾದರ್ ಅರ್ಪಿಸುವುದು ಒಂದು ವಿಶಿಷ್ಟ ಅನುಭವ ಎಂದು ಅವರು ಹೇಳಿದರು.
ಕೇಂದ್ರ ಸಚಿವರೊಂದಿಗೆ ಹಿರಿಯ ಬಿಜೆಪಿ ನಾಯಕರು, ದರ್ಗಾ ಸಮಿತಿಯ ನಜೀಮ್ ಮತ್ತು ಅಂಜುಮನ್ ಸೈಯದ್ ಜಡ್ಗನ್ ಖುದ್ದಾಂ-ಎ-ಖ್ವಾಜಾ ಸದಸ್ಯರು ಕೂಡ ಉಪಸ್ಥಿತರಿದ್ದರು. ಪ್ರಧಾನ ಮಂತ್ರಿ ನೀಡಿದ ಚದ್ದರ್ ಅನ್ನು ದರ್ಗಾಕ್ಕೆ ತರುವಾಗ ಭಕ್ತರ ಭೇಟಿಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಕಟ್ಟುನಿಟ್ಟಾದ ಪೊಲೀಸ್ ಕಣ್ಗಾವಲಿನಲ್ಲಿ ಜನ್ನತಿ ದರ್ವಾಜಾ (ಸ್ವರ್ಗದ ದ್ವಾರ) ಮೂಲಕ ಚಾದರ್ ತರಲಾಯಿತು. ದರ್ಗಾ ಅಂಜುಮನ್ ಸದಸ್ಯರು ಕಿರಣ್ ರಿಜಿಜು ಅವರನ್ನು ಸನ್ಮಾನಿಸಿ ಉಡುಗೊರೆ ನೀಡಿದರು.

