ಹೊಸದಿಗಂತ , ಶಿವಮೊಗ್ಗ:
ಶರಾವತಿ ಕಣಿವೆ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಭೂಗತ ಜಲವಿದ್ಯುತ್ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಜನಸಂಗ್ರಾಮ್ ಪರಿಷತ್‌ನ ಜಿಲ್ಲಾಧ್ಯಕ್ಷ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2017ರಿಂದ ಮುನ್ನೆಲೆಗೆ ಬಂದ ಈ ಯೋಜನೆಗೆ ಜನವಿರೋಧದ ಇದ್ದ ಕಾರಣಕ್ಕೆ ಕೈಬಿಟ್ಟಿದ್ದ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ ಎಂದರು.
ಇದುವರೆಗೂ ನಾಗರಿಕ ಪ್ರಪಂಚದ ಅರಿವಿಗೆ ಹೊರತಾದ ದಟ್ಟಾರಣ್ಯ ಪ್ರದೇಶವನ್ನು ಸಂಪೂರ್ಣವಾಗಿ ನಾಶಮಾಡುವ ಈ ಯೋಜನೆಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ತಲಕಳಲೆ ಅಣೆಕಟ್ಟಿನಿಂದ ಹರಿದು ಒಮ್ಮೆ ವಿದ್ಯುತ್ ಉತ್ಪಾದನೆಯಾಗಿ ಗೇರುಸೊಪ್ಪ ಅಣೆಕಟ್ಟಿಗೆ ಸೇರುವ ನೀರನ್ನು ಮತ್ತೆ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಗೇರುಸೊಪ್ಪ ಅಣೆಕಟ್ಟಿನಿಂದ ತಲಕಳಲೆ ಅಣೆಕಟ್ಟಿಗೆ ಎತ್ತಿ ತಂದು ಬೇಡಿಕೆ ಇರುವ ಹೊತ್ತಿನಲ್ಲಿ ಒಮ್ಮೆ ಬಳಕೆಯಾದ ನೀರಿನಿಂದ ಮತ್ತೆ ವಿದ್ಯುತ್ ಮರು ಉತ್ಪಾದನೆ ಮಾಡುವ ಯೋಜನೆ ಇದಾಗಿದೆ ಎಂದರು.
ಈ ಯೋಜನೆಯಿಂದ 2000 ಮೆಗಾವ್ಯಾಟ್ ಉತ್ಪಾದನೆ ಮಾಡುತ್ತೇವೆ ಎಂದು ಕೆಪಿಟಿಸಿಎಲ್ ಪ್ರತಿಪ್ರಾಧಿಸುತ್ತಿದೆ. ಇದೊಂದು ಅನಾವಶ್ಯಕ ಯೋಜನೆಯಾಗಿದೆ. ಇದರಿಂದ ನಾಗರಿಕ ಪ್ರಪಂಚಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಅತಿ ಹೆಚ್ಚು, ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು, ಈ ಯೋಜನೆಗೆ ಸುಮಾರು 8000 ಕೋಟಿ ರೂ.ಬೇಕಾಗಿದೆ. ಇಷ್ಟೊಂದು ಕೋಟಿ ಹಣವನ್ನು ಖರ್ಚುಮಾಡುವುದು ಸರಿಯಲ್ಲ. ಇದರ ಬದಲಾಗಿ ಸೋಲಾರ್ ಶಕ್ತಿ ಉತ್ಪಾದನೆಗೆ ಆದ್ಯತೆ ನೀಡಬೇಕು. ಇದನ್ನು ಕೈ ಬಿಡದಿದ್ದರೆ ಹೋರಾಟದ ಜತೆಗೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಯೋಜನೆಯಿಂದ ಸಿಂಗಳಿಕ ಆವಾಸ ಸ್ಥಾನಕ್ಕೆ ಧಕ್ಕೆಯಾಗಲಿದೆ ಎಂದರು.