ಚಾರ್‌ಧಾಮ್ ಯಾತ್ರೆಯ ಮೊದಲ ತಿಂಗಳಲ್ಲಿ 125 ಭಕ್ತರ ಸಾವು: ಸರ್ಕಾರದಿಂದ ಹೊಸ ಮಾರ್ಗಸೂಚಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯರು ಅತ್ಯಂತ ಪವಿತ್ರವೆಂದು ಭಾವಿಸುವ ಚಾರ್ ಧಾಮ್ ಯಾತ್ರೆ ಆರಂಭವಾಗಿ ಒಂದು ತಿಂಗಳಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹಿಮಾಲಯದಲ್ಲಿರುವ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ಕಳೆದ ತಿಂಗಳು 3 ರಿಂದ ಸಾರ್ವಜನಿಕ ದರ್ಶನಕ್ಕೆ ತೆರೆದುಕೊಂಡಿದೆ. ಯಾತ್ರೆ ಆರಂಭವಾದ ಒಂದು ತಿಂಗಳೊಳಗೆ 125 ಭಕ್ತರು ಸಾವನ್ನಪ್ಪಿದ್ದಾರೆ. ಇದು ಮೇ-ಅಕ್ಟೋಬರ್‌ನ ಸರಾಸರಿ ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಮತ್ತು ಆರೋಗ್ಯ ಸಚಿವಾಲಯದ ಆತಂಕ ವ್ಯಕ್ತಪಡಿಸಿದೆ. ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ 100 ಸಾವುಗಳು ಸಂಭವಿಸುತ್ತಿದ್ದವು. ಆದರೆ ಒಂದೇ ತಿಂಗಳಿಗೆ ಸಾವಿನ ಸಂಖ್ಯೆ ನೂರರ ಗಡಿ ದಾಟಿದೆ.

ಎರಡು ವರ್ಷಗಳ ನಂತರ ಪೂರ್ಣ ಪ್ರಮಾಣದ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಕರೋನಾ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಸಾಮಾನ್ಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಚಾರ್ ಧಾಮ್ ಯಾತ್ರೆಗೆ ನಿತ್ಯವೂ 55,000 ರಿಂದ 58,000 ಯಾತ್ರಿಕರು ಭೇಟಿ ನೀಡುತ್ತಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸಿಎಂ ಪುಷ್ಕರ್ ಸಿಂಗ್ ಧಾಮಿಯವರು ಖುದ್ದು ಚಾರ್‌ಧಾಮ್‌ ಯಾತ್ರೆಯ ಪರಿಶೀಲನೆ ನಡೆಸಿದ್ದು, ಉಸ್ತುವಾರಿಗೆ ಇಬ್ಬರು ಸಂಪುಟ ಸಚಿವರನ್ನು ನೇಮಿಸಿದ್ದಾರೆ. ಮತ್ತೊಂದೆಡೆ ಚಾರ್ ಧಾಮ್ ಗೆ ಬಂದು ಸಾವನ್ನಪ್ಪಿದ 125 ಭಕ್ತರಲ್ಲಿ 75 ಮಂದಿ ವೃದ್ಧರು, 35 ಮಂದಿ ಮಹಿಳೆಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ನಂತರದ ಅಡ್ಡಪರಿಣಾಮಗಳು, ಹೃದಯ ಸಮಸ್ಯೆ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಗೆ ಬರುವ ಯಾತ್ರಾರ್ಥಿಗಳಿಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ವಯೋವೃದ್ಧರು, ಇತರೆ ಕಾಯಿಲೆ ಇರುವ ಭಕ್ತರು ತಮ್ಮ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ, ಕೋವಿಡ್‌ನಿಂದ ಚೇತರಿಸಿಕೊಂಡವರು, ಹೃದಯ ಸಂಬಂಧಿ ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮೊಂದಿಗೆ ಆಮ್ಲಜನಕ ಬಾಟಲಿಗಳನ್ನು ಕೊಂಡೊಯ್ಯಲು ಸೂಚಿಸಿದ್ದಾರೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುರ್ತು ವೈದ್ಯಕೀಯ ಶಿಬಿರಗಳನ್ನು ಸಹ ಸ್ಥಾಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!