ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಮೇಲೆ ನಡೆದ ಗುಂಡಿನ ದಾಳಿ ಇಡೀ ರಾಜಕೀಯ ಜಗತ್ತನ್ನೇ ತಲ್ಲಣಗೊಳಿಸಿದ್ದು, ಇವರ ಕೊಲೆ ಸಂಚಿನ ಕುರಿತು ಹಲವು ಅಂಶಗಳು ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬರುತ್ತಿವೆ.
ಬಾಬಾ ಸಿದ್ದಿಕಿ ಅವರನ್ನು ಕೊಲೆ ಮಾಡು ಆರೋಪಿಗಳು ಕೊಲೆ ಮಾಡಲು ತಿಂಗಳಾನುಗಟ್ಟಲೇ ಹೊಂಚು ನಡೆಸಿದ್ದರು. ಕ್ಷಣ ಕ್ಷಣಕ್ಕೂ ಬಾಬಾ ಸಿದ್ದಿಕಿಯ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದರು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಹರಿಯಾಣ ನಿವಾಸಿ ಗುರ್ಮೆಲ್ ಬಲ್ಜಿತ್ ಸಿಂಗ್ (23) ಮತ್ತು ಇನ್ನೊಬ್ಬ ಉತ್ತರ ಪ್ರದೇಶ ನಿವಾಸಿ ಧರ್ಮರಾಜ್ ರಾಜೇಶ್ ಕಶ್ಯಪ್ (19) ಬಂಧಿಸಲಾಗಿದೆ. ಅಲ್ಲದೆ ಮೂರನೇ ಆರೋಪಿ ಶಿವಕುಮಾರ್ ಅಲಿಯಾಸ್ ಶಿವ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ಅವರ ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬಾಬಾ ಸಿದ್ಧಿಕಿಗೆ ಸಲ್ಮಾನ್ ಖಾನ್ ಆಪ್ತರಾಗಿದ್ದರು. ಅವರ ನಿಧನದ ಬಳಿಕ ಸಲ್ಲು ಮನೆ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ತಮ್ಮ ನಿವಾಸ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಯಾರೂ ಭೇಟಿ ನೀಡಬೇಡಿ ಎಂದು ಸಲ್ಮಾನ್ ಖಾನ್ ಕುಟುಂಬದವರು ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಈ ಮೊದಲು ಸಲ್ಮಾನ್ ಖಾನ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಅವರ ಆಪ್ತರಾದ ಬಾಬಾ ಸಿದ್ಧಿಕಿ ಕೊಲೆ ಆಗಿರುವುದರಿಂದ ಸಲ್ಲು ಫ್ಯಾಮಿಲಿಗೆ ಆತಂಕ ಹೆಚ್ಚಿದೆ.
ಬಾಬಾ ಸಿದ್ಧಿಕಿ ಅವರ ಕುಟುಂಬಕ್ಕೆ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಸಿದ್ಧಿಕಿ ಪುತ್ರ ಝೀಶಾನ್ ಜೊತೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸ್ನೇಹಿತನನ್ನು ಕಳೆದುಕೊಂಡಿರುವ ಸಲ್ಮಾನ್ ಖಾನ್ಗೆ ತೀವ್ರ ಆತಂಕ ಉಂಟಾಗಿದೆ. ರಾತ್ರಿ ಅವರು ನಿದ್ದೆ ಮಾಡಿಲ್ಲ. ಈ ಮೊದಲೇ ನಿಗದಿ ಆಗಿದ್ದ ಎಲ್ಲ ಮೀಟಿಂಗ್ಗಳನ್ನು ಅವರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಮಾತ್ರವಲ್ಲದೇ ಅವರ ಕುಟುಂಬದ ಬೇರೆ ಎಲ್ಲ ಸದಸ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಸಲ್ಲು ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಕೂಡ ಆಗಾಗ ಬಾಬಾ ಸಿದ್ಧಿಕಿ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಈಗ ಅವರ ನಿಧನದಿಂದ ಶೋಕ ಆವರಿಸಿದೆ. ಬಾಬಾ ಸಿದ್ಧಿಕಿ ಅಂತ್ಯಕ್ರಿಯೆ ಸಕಲ ತಯಾರಿಯ ಬಗ್ಗೆ ಸಲ್ಮಾನ್ ಖಾನ್ ಅವರು ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿದೆ.
ಬಾಂದ್ರಾದಲ್ಲಿ ಇರುವ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಬಾಲಿವುಡ್ನ ಅನೇಕರು ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಆದರೆ ಈಗ ತಮ್ಮನ್ನು ಯಾರೂ ಕೂಡ ಭೇಟಿ ಮಾಡುವುದು ಬೇಡ ಎಂದು ಸಲ್ಮಾನ್ ಖಾನ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ. ಸಿನಿಮಾ ಶೂಟಿಂಗ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ಸಲ್ಮಾನ್ ಖಾನ್ ಬ್ಯುಸಿ ಆಗಿದ್ದರು. ಆದರೆ ಆ ಕೆಲಸಗಳಿಗೆ ಅವರು ಬ್ರೇಕ್ ಹಾಕುವಂತಾಗಿದೆ.