ಹೊಸ ವರ್ಷಾಚರಣೆಗೆ ಅಲರ್ಟ್: ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಡಾ.ಜಿ.ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುರಕ್ಷತೆಗೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಸೌಧದಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಹೊಸ ವರ್ಷ ಹಾಗೂ ಕ್ರಿಸ್‍ಮಸ್ (Christmas) ಆಚರಣೆಗೆ ಸ್ವಲ್ಪ ನಿಯಮಗಳನ್ನು ಬದಲಾವಣೆ ಮಾಡಲಾಗುತ್ತದೆ. ಯಾವುದೇ ನಿರ್ಬಂಧ ಇಲ್ಲ. ಜನರು ಕೋವಿಡ್ (Covid-19) ನಿಯಮಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆ ಸೂಚನೆಯಂತೆ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಹಾಕಬೇಕು. ಮೆಟ್ರೋ ವಿಚಾರದಲ್ಲಿ ಸ್ವಲ್ಪ ಬದಲಾವಣೆಗೆ ಸೂಚಿಸಿದ್ದೇವೆ. ಟ್ರಿನಿಟಿ ಸರ್ಕಲ್‍ನಿಂದಲೂ, ಅನಿಲ್ ಕುಂಬ್ಳೆ ಸರ್ಕಲ್‍ನಿಂದಲೂ ಮೆಟ್ರೋಗೆ ಹೋಗಲು ಅನುಕೂಲ ಕಲ್ಪಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಡೀ ರಾಜ್ಯದಲ್ಲಿ ಯುವಕರು ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಆಚರಣೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಘಟನೆಗಳು ಸಹ ನಡೆದಿದೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಸೂಚಿಸಲಾಗಿದೆ. ಈ ಬಗ್ಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ಇಲಾಖೆಗಳಲ್ಲಿ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಸೂಚನೆ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‍ಐಎ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿ, ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಹೊರಗಡೆಯಿಂದ ಬೇರೆ ಉದ್ದೇಶವಿಟ್ಟುಕೊಂಡು ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಈ ಬಗ್ಗೆ ಗುಪ್ತಚರ ಇಲಾಖೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಸೂಚನೆ ಪ್ರಕಾರ, ಹೆಚ್ಚು ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಬೇಕಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯವಾಗಿದೆ. ಅದರ ಹೊರತಂತೆ ಬೇರೆ ನಿಬಂಧನೆಗಳಿಲ್ಲ. ಮೆಟ್ರೊ ಪ್ರಯಾಣಿಕರು ಎಂ.ಜಿ.ರಸ್ತೆ ಬದಲು ಕುಂಬ್ಳೆ ಅಥವಾ ಟ್ರಿನಿಟಿ ಸರ್ಕಲ್‍ನಲ್ಲಿ ಪ್ರವೇಶ ಪಡೆಯುವುದು ಸೇರಿದಂತೆ ಸಣ್ಣಪುಟ್ಟ ಬದಲಾವಣೆಗಳನ್ನಷ್ಟೇ ಮಾಡಲಾಗುತ್ತಿದೆ ಎಂದು ಹೇಳಿದರು.

ಜನಸಂದಣಿ ಸೇರುವ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಸಾಧ್ಯತೆಯಿದೆ. ಇದರಿಂದ ಅವಘಡಗಳಾಗುವ ಅವಕಾಶವಿದ್ದು, ಜಾಗೃತರಾಗಿರುವಂತೆ ಅಗ್ನಿಶಾಮಕ ಅಕಾರಿಗಳಿಗೆ ಸಲಹೆ ನೀಡಲಾಗಿದೆ. ಪಬ್ ಮತ್ತು ಬಾರ್‍ಗಳಲ್ಲಿ ಸುರಕ್ಷತಾ ಕ್ರಮಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮೇಲ್ಛಾವಣಿಯಲ್ಲಿ ಅಡುಗೆ ಮಾಡುವುದಕ್ಕೆ ಅವಕಾಶ ಕೊಡಬಾರದು. ಮದ್ಯದಂಗಡಿಗಳಿಗೆ ಯಥಾ ರೀತಿಯ ಸಮಯದ ನಿಗದಿಯಿರುತ್ತದೆ. ವಿಶೇಷ ರಿಯಾಯಿತಿ ಇರುವುದಿಲ್ಲ ಎಂದರು.

ತಾತ್ಕಾಲಿಕ ಷೆಡ್‍ಗಳನ್ನು ಹಾಕಿಕೊಂಡು ರೆಸ್ಟೋರೆಂಟ್ ನಡೆಸುವುದು, ಮದ್ಯ ಸರಬರಾಜು ಮಾಡುವಂತಹ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲಾಗುತ್ತಿದೆ. ಯಾವುದನ್ನೂ ನಿರ್ಬಂಧಿಸುವುದಿಲ್ಲ. ಆದರೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದರು. ಪೊಲೀಸರು ಅಲ್ಲಲ್ಲಿ ತಾತ್ಕಾಲಿಕ ಸಹಾಯ ವೇದಿಕೆಗಳನ್ನು ತೆರೆಯಬೇಕು, ಮೈಕ್‍ಗಳಲ್ಲಿ ಜನರಿಗೆ ಮಾಹಿತಿಯನ್ನು ನೀಡುತ್ತಿರಬೇಕು, ಮೆಟ್ರೋ, ಬಸ್ ಮತ್ತು ಸಾರ್ವಜನಿಕ ಬಸ್‍ಗಳು ಹೆಚ್ಚು ಸಂಚರಿಸಬೇಕು, ಪಾರ್ಕಿಂಗ್ ಸ್ಥಳಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿರುವುದಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!