ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಜೋಡಿ ಆಲಿಯಾ ಮತ್ತು ರಣಬೀರ್ ಕಪೂರ್ ಪ್ರಸ್ತುತ ಒಂದೆಡೆ ಸಿನಿಮಾ ಮಾಡುತ್ತಿದ್ದು, ಮತ್ತೊಂದೆಡೆ ತಮ್ಮ ಮಗಳು ರಾಹಾ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಏನು ಮಾಡುತ್ತಾರೆ ಎಂಬುದರ ಮೇಲೆ ಛಾಯಾಗ್ರಾಹಕರ ಕಣ್ಣು ಸದಾ ಅವರ ಮೇಲಿರುತ್ತವೆ. ಬಾಲಿವುಡ್‌ನಲ್ಲಿ ಕೆಲವು ಛಾಯಾಗ್ರಾಹಕರು ಸೆಲೆಬ್ರಿಟಿಗಳ ಮನೆ ಮುಂದೆ ಠಿಕಾಣಿ ಕೂಡ ಹೂಡಿರುತ್ತಾರೆ. ಇವರಿಂದಾಗಿ ತಮ್ಮ ವೈಯಕ್ತಿಕ ಜೀವನ ಕಷ್ಟವಾಗುತ್ತಿದೆ ಅಂತಿದಾರೆ ಬಿಟೌನ್ ಮಂದಿ.
ಇತ್ತೀಚೆಗಷ್ಟೇ ಆಲಿಯಾ ಮತ್ತು ರಣಬೀರ್ ಈ ಛಾಯಾಗ್ರಾಹಕರ ಮೇಲೆ ಗುಡುಗಿದ್ದಾರೆ. ಆಲಿಯಾ ಮತ್ತು ರಣಬೀರ್‌ಗೆ ಮಗು ಜನಿಸಿದ ನಂತರ ಅವರ ಮೇಲೆ ಫೋಟೋಗ್ರಾಫರ್‌ಗಳ ಗಮನ ಹೆಚ್ಚಾಗಿದೆ. ಇತ್ತೀಚಿಗೆ ಆಲಿಯಾ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದ ವೇಳೆ ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎಂದು ಶಂಕಿಸಿ ಪಕ್ಕದ ಕಟ್ಟಡದ ಮೇಲಿಂದ ಕ್ಯಾಮೆರಾ ಹಿಡಿದು ತನ್ನ ಮನೆಯತ್ತ ನೋಡುತ್ತಿರುವುದನ್ನು ಗಮನಿಸಿದ್ದಾರೆ. ಪ್ರೆಸ್ ಮೀಟ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು.
ನಾವಂದರೆ ನಿಮಗೆ ತಮಾಷೆಯಾ? ಕ್ಯಾಮೆರಾಗಳ ಮೂಲಕ ನಮ್ಮ ಮನೆಯ ಮೇಲೆ ಕಣ್ಣಿಡುತ್ತೀರಾ? ನಮಗೆ ವೈಯಕ್ತಿಕ ಜೀವನ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದೇ ಪ್ರೆಸ್ ಮೀಟ್ ನಲ್ಲಿ ರಣಬೀರ್ ಹೇಳಿದ್ದು.. ಪ್ರತಿಯೊಬ್ಬರಿಗೂ ಖಾಸಗಿ ಜೀವನ ಇರುತ್ತದೆ. ನೀವು ನಮ್ಮ ಮನೆಯೊಳಗೆ ಬರಬಹುದೇ? ಇದು ತುಂಬಾ ತಪ್ಪು. ಉದ್ಯಮದಲ್ಲಿ ಛಾಯಾಗ್ರಾಹಕರು, ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮಗೆ ನೀವು ಬೇಕು, ನಿಮಗೆ ನಾವು ಬೇಕು. ಆದರೆ ಇಂತಹ ಕೆಲಸಗಳನ್ನು ಮಾಡಿದರೆ ಇಬ್ಬರ ನಡುವಿನ ಬಾಂಧವ್ಯ ಹಾಳಾಗುತ್ತದೆ. ಈ ಬಗ್ಗೆ ನಮಗೆ ಕಾನೂನು ಅರಿವಿದೆ. ಹೀಗೆ ಮುಂದುವರಿದರೆ ಕಾನೂನಿನ ಮೂಲಕ ಉತ್ತರಿಸಲಾಗವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಲಿಯಾ ರಣಬೀರ್ ಮಾತ್ರವಲ್ಲದೆ ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಕಾನೂನಾತ್ಮಕವಾಗಿ ಹೋಗುತ್ತೇನೆ ಎಂದು ರಣಬೀರ್ ಹೇಳಿರುವುದರಿಂದ ಛಾಯಾಗ್ರಾಹಕರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನಕ್ಕೆ ಹೋಗುವುದನ್ನು ನಿಲ್ಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.