ಡಿಸೆಂಬರ್ ನೊಳಗೆ ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳೂ ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳೂ ಶೀಘ್ರ ಗುಂಡಿ ಮುಕ್ತ ಆಗಲಿವೆ. 2023ರ ಡಿಸೆಂಬರ್ ಒಳಗೆ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತ ಮಾಡುವಂತೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಡೆಡ್‌ಲೈನ್ ನೀಡಿದ್ದಾರೆ.

ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನೂ ಗುಂಡಿ ಮುಕ್ತ ಮಾಡುವ ಸಂಬಂಧ ಕೇಂದ್ರ ಸರ್ಕಾರ ನೀತಿ ರೂಪಿಸುತ್ತಿದ್ದು, ಇದಕ್ಕಾಗಿ ಯುವ ಎಂಜಿನಿಯರ್‌ಗಳಿಗೆ ಹೊಣೆಗಾರಿಕೆ ನೀಡಲು ತೀರ್ಮಾನಿಸಿದೆ. ಯುವ ಎಂಜಿನಿಯರ್‌ಗಳ ಸಾರಥ್ಯದಲ್ಲಿ ಯೋಜನೆ ಯಶಸ್ವಿಗೊಳಿಸುವ ಮೂಲಕ, ಹೊಸ ಭಾಷ್ಯ ಬರೆಯಲು ಇಲಾಖೆ ತೀರ್ಮಾನಿಸಿದೆ. ಮಳೆಯಿಂದ ಹೆದ್ದಾರಿಗಳಲ್ಲಿ ರಸ್ತೆ ಗುಂಡಿಗಳು ನಿರ್ಮಾಣ ಆಗುವ ಹಿನ್ನೆಲೆ ಸರ್ಕಾರದ ನೂತನ ನೀತಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿದೆ.

ಹೆದ್ದಾರಿ ಇಕ್ಕೆಲಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲವಾದ ಕಾರಣ, ಸರ್ಕಾರದ ಹೊಸ ನೀತಿಯಲ್ಲಿ ಈ ಅಂಶವನ್ನೂ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ಮನೆ ಮನೆಗಳಿಂದ ಸಂಗ್ರಹಿಸುವ ಕಸದಿಂದಲೂ ರಸ್ತೆ ನಿರ್ಮಿಸುವ ಯೋಜನೆ ಇದೆ ಎಂದು ಕೇಂದ್ರ ಸಚಿವ ಗಡ್ಕರಿ ತಿಳಿಸಿದ್ದಾರೆ. ನಗರ, ಪಟ್ಟಣಗಳಲ್ಲಿ ಮನೆ ಮನೆಗಳಲ್ಲಿ ಸಂಗ್ರಹ ಅಗುವ ಘನ ತ್ಯಾಜ್ಯ ಬಳಸಿಕೊಂಡು ರಸ್ತೆ ನಿರ್ಮಿಸುವ ಯೋಜನೆ ಸಿದ್ದವಾಗುತ್ತಿದೆ. ದಿಲ್ಲಿ ಮುಂಬೈ ಎಕ್ಸ್‌ಪ್ರೆಸ್ ವೇ, ಅಹಮದಾಬಾದ್ ಧೊಲೆರಾ ಎಕ್ಸ್‌ಪ್ರೆಸ್‌ ವೇಗಳಲ್ಲಿ ಈ ಯೋಜನೆ ಈಗಾಗಲೇ ಜಾರಿಗೆ ಬಂದಿದೆ ಎಂದು ಗಡ್ಕರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!