ಉತ್ತರ ಕನ್ನಡ ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಮಾಹಿತಿ

ಹೊಸದಿಗಂತ ಕಾರವಾರ:

ಪಹಲ್ಗಾಮ್ ಪ್ರಕರಣದ ಹಿನ್ನಲೆಯಲ್ಲಿ ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ ಕೇಂದ್ರ ಗೃಹ ಸಚಿವಾಲಯದದಿಂದ ಹಲವು ರಾಜ್ಯಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲು ನಿರ್ದೆಶನ ಬಂದಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯನ್ನು ಕೆಟಗಿರಿ 2 ರಲ್ಲಿ ಸೇರ್ಪಡೆ ಮಾಡಿದ್ದು, ಜಿಲ್ಲೆಯ ಮಲ್ಲಾಪುರದಲ್ಲಿ ಅಣಕು ಕಾರ್ಯಚರಣೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷಿಪ್ರಿಯ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ನಾಗರಿಕ ರಕ್ಷಣೆ ಅಣಕು ಕಾರ್ಯಚರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯು ಅತ್ಯಂತ ಉದ್ದವಾದ ಕರಾವಳಿ ತೀರವನ್ನು ಹೊಂದಿರುವುದು ಮಾತ್ರವಲ್ಲದೇ ಅನೇಕ ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಈ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ ಅಣಕು ಅಭ್ಯಾಸ ನಡೆಸಲು , ಸರ್ಕಾರದಿಂದ ಒಂದು ವಾರದ ಒಳಗೆ ನಿಗಧಿತ ದಿನಾಂಕವನ್ನು ನೀಡಲಿದ್ದು , ಅದಕ್ಕಾಗಿ ಈಗಿನಿಂದಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಂದು ಕಡೆ ಮಾತ್ರ ಅಣಕು ಕಾರ್ಯಚರಣೆಗೆ ನಿರ್ದೇಶನ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ, ಬೆಂಕಿಯಿಂದ ರಕ್ಷಣೆ ಮಾಡಲು ನಿರ್ದೇಶನವಿದ್ದು, ಜಿಲ್ಲೆಯಲ್ಲಿ ಸಮುದ್ರ ತೀರ ಇರುವುದರಿಂದ ಇಲ್ಲಿನ ಜನರ ರಕ್ಷಣೆಗೆ ಕೂಡಾ ಅಭ್ಯಾಸ ನಡೆಸಲಿದ್ದು, ಆಸ್ಪತ್ರೆಗಳಲ್ಲಿ ಎಲ್ಲಾ ಉಪಕರಣಗಳ ಸಿದ್ದತೆ, ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ಕೂಡಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಉಪ ವಿಭಾಗಾಧಿಕಾರಿ ಕನಿಷ್ಕ ಎ.ಎಸ್ಪಿ ಜಗದೀಶ್, ಕೃಷ್ಣಮೂರ್ತಿ , ನೌಕಾಪಡೆ, ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಹಾಗೂ ಎಲ್ಲಾ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!